ಈ ಸೇವೆಗಳಿಗೆ ಇನ್ನುಮುಂದೆ ಜನನ ಪ್ರಮಾಣ ಪತ್ರ ಕಡ್ಡಾಯ! – ಅಕ್ಟೋಬರ್ 1ರಿಂದಲೇ ಜಾರಿ
ನವದೆಹಲಿ: ಹಲವು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಮಾಡುವ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನೋಂದಣಿಯಂತಹ ಹಲವಾರು ಕೆಲಸಗಳು ಮತ್ತು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಅ. 1 ರಿಂದ ಒಂದೇ ದಾಖಲೆಯಾಗಿ ಪರಿಗಣಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇತ್ತೀಚಿಗೆ ಸಂಸತ್ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಕೇಂದ್ರ ಗೃಹ ಇಲಾಖೆ ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮಾಹಿತಿ ನೀಡಿದ್ದು, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಆಧಾರ್ ಸಂಖ್ಯೆ, ಮದುವೆ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮುಂತಾದ ಹಲವಾರು ಉದ್ದೇಶಗಳಿಗಾಗಿ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅನುಮತಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ – ನಗರ ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ
ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ದಾಖಲೆಯನ್ನು ರಚಿಸಲು ಕಾನೂನು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ಡಿಜಿಟಲ್ ನೋಂದಣಿ ಮೂಲಕ ಸಮರ್ಥ ಮತ್ತು ಪಾರದರ್ಶಕ ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ಖಚಿತಪಡಿಸುತ್ತದೆ.
ಮತದಾರ ಪಟ್ಟಿಯೊಂದಿಗೆ ಜನನ/ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲಿಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಲಿದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ಕಡೆಯಿಂದ ಸೂಚನೆ ಬರಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ, ಚುನಾವಣಾ ಆಯೋಗವು ತಾನೇ ಆ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಆದರೆ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.