ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ – ವಾಹನಗಳಿಗೆ ಇಂಧನ ತುಂಬಿಸೋದೇ ಸವಾಲು
ಆರ್ಥಿಕವಾಗಿ ಪಾತಾಳಕ್ಕೆ ಕುಸಿದು ನರಳುತ್ತಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ಏರುತ್ತಲೇ ಇದೆ. ಪಾಕ್ನಲ್ಲಿ ಬಡ ಜನರ ಬದುಕು ನರಳಾಡುವ ಸನ್ನಿವೇಶಕ್ಕೆ ಸಿಲುಕಿಬಿಟ್ಟಿದೆ. ದಿನನಿತ್ಯ ಬೇಕಾಗಿರುವ ವಸ್ತುಗಳು ಕೈಗೆ ಸಿಗುತ್ತಿಲ್ಲ, ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 300 ರೂಪಾಯಿ ಗಡಿ ದಾಟಿದೆ. ಇದು ಪಾಕಿಸ್ತಾನದ ಸಾಮಾನ್ಯ ಜನರಿಗೆ ಚಳಿ ಜ್ವರ ಬರಿಸಿದೆ. ಅಲ್ಲಿನ ಜನ ಕನಿಷ್ಠ ಜೀವನ ನಡೆಸಲು ಪರದಾಡುತ್ತಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಗಳ ಅಪಹರಣ – ಬರಗೆಟ್ಟ ದೇಶದಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್!
ಆರ್ಥಿಕ ಅದಃಪತನದಿಂದ ಪಾಕಿಸ್ತಾನದಲ್ಲಿ ಜನಜೀವನ ತತ್ತರಗೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ನಡುವೆ ಪೆಟ್ರೋಲ್, ಡೀಸೆಲ್ ದರವನ್ನ ಮತ್ತೆ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ (Price Hike) ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 26.02 ಪಿಕೆಆರ್ (ಅಂದಾಜು 7.28 ರೂ.) ಏರಿಕೆ ಮಾಡಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 17.34 ಪಿಕೆಆರ್ (ಅಂದಾಜು 4.85 ರೂ.) ಏರಿಕೆ ಮಾಡಿದೆ. ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 333.38 ಪಿಕೆಆರ್ (ಅಂದಾಜು 93.26 ರೂ.) ಮಾರಾಟ ಮಾಡುತ್ತಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 329.18 ಪಿಕೆಆರ್ (ಅಂದಾಜು 92.09 ರೂ.) ಆಗಿದೆ.