ಮಹಿಳೆಯ ದೇಹದಿಂದ ಕೆಟ್ಟ ವಾಸನೆ – ವಿಮಾನದಿಂದ ಕೆಳಗಿಳಿಸಿದ ಏರ್ಲೈನ್ಸ್ ಸಿಬ್ಬಂದಿ!
ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಚಿತ್ರ ವಿಚಿತ್ರ ಘಟನೆಗಳು ವರದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ವಿಮಾನದಲ್ಲಿ ಈರುಳ್ಳಿ ವಾಸನೆಯಿಂದಾಗಿ ಶಾರ್ಜಾಗೆ ಹೊರಟಿದ್ದ ವಿಮಾನ ಕೊಚ್ಚಿಗೆ ವಾಪಾಸ್ ಬಂದ ಘಟನೆ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೇ, ನಾಯಿ ಬಿಡ್ತಿದ್ದ ಗ್ಯಾಸ್ ವಾಸನೆಗೆ ಬೇಸತ್ತ ದಂಪತಿ ಟಿಕೆಟ್ ಹಣ ವಾಪಸ್ ಪಡೆದಿದ್ದರು. ಈಗ ಮನುಷ್ಯರ ಬೆವರು ವಾಸನೆ ಕಾರಣಕ್ಕೆ ವಿಮಾನದಿಂದ ಇಳಿಸಿದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಪ್ರಯಾಣದ ವೇಳೆ ಪರ್ಪ್ಯೂಮ್ ವಾಸನೆ, ಬೆವರಿನ ವಾಸನೆ ಬರೋದು ಕಾಮನ್. ಆದ್ರೆ ಕೆಲವರ ಬೆವರಿನ ವಾಸನೆ ಮಾತ್ರ ಇನ್ನೊಬ್ಬರಿಗೆ ತಲೆನೋವು ಬರುವಂತೆ ಮಾಡುತ್ತದೆ. ಇಲ್ಲೊಬ್ಬಳು ಮಹಿಳೆಯ ದೇಹದಿಂದ ಕೆಟ್ಟ ಬೆವರು ವಾಸನೆ ಬರುತ್ತಿದೆ ಎನ್ನುವ ಕಾರಣಕ್ಕೆ ವಿಮಾನ ಸಿಬ್ಬಂದಿ ದಂಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿದ ಘಟನೆ ನಡೆದಿದೆ. ಈ ಘಟನೆ ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿರುದ್ಧ ದಂಪತಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಾಗರಹಾವಿಗೆ ಡೀಸೆಲ್ ಎರಚಿ ವಿಕೃತಿ ಮೆರೆದ – ಒಂದೇ ವಾರದಲ್ಲಿ ಆತನಿಗೆ ಕಾಡಿತು ಸರ್ಪದೋಷ!
ಅಮೆರಿಕನ್ ಏರ್ಲೈನ್ಸ್ ವಿಮಾನದಿಂದ ಕೆಳಗಿಳಿಸಿ ಮುಜುಗರ ತಂದಿದೆ ಎಂದು ದಂಪತಿ ಆರೋಪಿಸಿದ್ದಾರೆ. ಈ ಆರೋಪ ಮಾಡಿದ ವ್ಯಕ್ತಿಯ ಹೆಸರು ಯೋಸ್ಸಿ ಆಡ್ಲರ್. ಅವರ ಹೆಂಡತಿಯ ಹೆಸರು ಜೆನ್ನಿ. ಈ ಪತಿ ಮತ್ತು ಪತ್ನಿ ಇಬ್ಬರೂ ಅಮೆರಿಕದ ಡೆಟ್ರಾಯಿಟ್ ನಿವಾಸಿಗಳು. ತಮ್ಮ 19 ತಿಂಗಳ ಮಗಳೊಂದಿಗೆ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವರಿಬ್ಬರು ಪ್ರಯಾಣ ಬೆಳೆಸುವವರಿದ್ದರು. ದಂಪತಿ ತಮ್ಮ ಮನೆಗೆ ಹೋಗುತ್ತಿದ್ದರು. ಆದರೆ ವಿಮಾನ ಪ್ರಯಾಣ ಶುರುವಾಗುವ ಮುನ್ನವೇ ಅವರು ಅವಮಾನ ಎದುರಿಸಬೇಕಾಯ್ತು. ವಿಮಾನದಿಂದ ಅವರನ್ನು ಇಳಿಸಲಾಯ್ತು. ವಿಮಾನದಿಂದ ಕೆಳಗೆ ಇಳಿಸುವ ವೇಳೆ ಯಾವುದೇ ಕಾರಣವನ್ನು ಹೇಳಿರಲಿಲ್ಲ ಎಂದು ದಂಪತಿ ಆರೋಪ ಮಾಡಿದ್ದಾರೆ.
ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಅವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಕೊನೆಯಲ್ಲಿ ಈ ವಿಷಯ ತಿಳಿದಿದೆ. ಮಹಿಳೆ ಬೆವರಿನ ವಾಸನೆ ಇಡೀ ವಿಮಾನವನ್ನು ಹರಡಿದ ಕಾರಣ, ಪ್ರಯಾಣಿಕರಿಗೆ ವಿಮಾನ ಪ್ರಯಾಣ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಕೊನೆಯಲ್ಲಿ ತಿಳಿದಿದೆ. ವಿಮಾನಯಾನ ಸಂಸ್ಥೆಯ ಈ ವರ್ತನೆಯಿಂದಾಗಿ ಅವರು ತಮ್ಮ ವಿಮಾನವನ್ನು ರದ್ದುಗೊಳಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಅಮೆರಿಕದ ವಿಮಾನಯಾನ ಸಂಸ್ಥೆ ಸ್ಪಷ್ಟನೆ ನೀಡಿದೆ. ದಂಪತಿ ವಿಮಾನ ಹತ್ತುವಾಗ ಅನೇಕ ಪ್ರಯಾಣಿಕರು ಅವರ ದೇಹದ ವಾಸನೆಯ ಬಗ್ಗೆ ದೂರು ನೀಡಿದ್ದರು. ಹಾಗಾಗಿ ಅವರನ್ನು ವಿಮಾನದಿಂದ ಇಳಿಸಲಾಯ್ತು. ಏರ್ಲೈನ್ಸ್ ಬರೀ ಅವರನ್ನು ವಿಮಾನದಿಂದ ಕೆಳಗೆ ಇಳಿಸಿಲ್ಲ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿತ್ತು, ಹೊಟೇಲ್ ರೂಮ್ ಹಾಗೂ ಆಹಾರ ಚೀಟಿಗಳನ್ನು ಸಹ ನೀಡಲು ಮುಂದಾಗಿತ್ತು. ಆದ್ರೆ ದಂಪತಿ ಇದನ್ನು ಒಪ್ಪಿಕೊಳ್ಳಲಿಲ್ಲ ಎಂದು ಏರ್ಲೈನ್ಸ್ ಹೇಳಿದೆ.
ಪತ್ನಿ ದೇಹದಿಂದ ಬೆವರಿನ ವಾಸನೆ ಬರ್ತಿದೆ ಎನ್ನುವ ಕಾರಣಕ್ಕೆ ನಮ್ಮನ್ನು ವಿಮಾನದಿಂದ ಇಳಿಸಿಲ್ಲ. ವಾಸ್ತವವಾಗಿ ಆಕೆ ದೇಹದಿಂದ ಯಾವುದೇ ಬೆವರಿನ ವಾಸನೆ ಬರ್ತಾ ಇರಲಿಲ್ಲ. ಇದಕ್ಕೆ ಬೇರೆಯದೇ ಕಾರಣವಿದೆ ಎಂದು ಆಡ್ಲರ್ ದೂರಿದ್ದಾರೆ.