ಗಣೇಶ ಚತುರ್ಥಿ ಹಿನ್ನೆಲೆ ಬಸ್ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ -ಖಾಸಗಿ ಬಸ್ ಮಾತ್ರವಲ್ಲ, ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರವೂ ಏರಿಕೆ!
ಬೆಂಗಳೂರು: ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಲು ಸಾಲು ರಜೆ ಇರುವ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರುವವರು ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದೀಗ ಊರಿಗೆ ಹೊರಟವರಿಗೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಬಸ್ ಟಿಕೆಟ್ ದರಗಳಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ.
ಹೌದು, ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ಖಾಸಗಿ ಬಸ್ಗಳು ಟಿಕೆಟ್ ದರ ಹೆಚ್ಚಿಸಿ ಸುಲಿಗೆ ಮಾಡುತ್ತಿದ್ದು, ಸಾರಿಗೆ ಇಲಾಖೆ ಕೇವಲ ಎಚ್ಚರಿಕೆ ನೀಡುವುದಕ್ಕೆ ಸೀಮಿತವಾಗಿದೆ. ಇನ್ನೊಂದೆಡೆ ರಾಜ್ಯದ ಜೀವನಾಡಿಗಳು ಎಂದು ಕರೆಯುವ ಕೆಎಸ್ಆರ್ಟಿಸಿ ಕೂಡಾ ತನ್ನ ವಿಶೇಷ ಬಸ್ಗಳ ಟಿಕೆಟ್ ದರವನ್ನು ಕೂಡ ಶೇ. 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪ್ರಯಾಣಿಕರು ಖಾಸಗಿ ಆಗಲಿ ಕೆಎಸ್ಆರ್ಟಿಸಿ ಆಗಲಿ ಹೆಚ್ಚಿನ ದರ ಪಾವತಿಸಿಯೇ ತಮ್ಮ ಊರುಗಳಿಗೆ ತೆರಳಬೇಕಾಗಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ! – ಅಂಚೆ ಇಲಾಖೆಯಿಂದ ಹೊಸ ಯೋಜನೆ
ಸದ್ಯ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ದರವನ್ನು ಅಧಿಕೃತ ವೆಬ್ಸೈಟ್ನಲ್ಲಿ ಚೆಕ್ ಮಾಡಲಾಗಿದೆ. ಅಲ್ಲಿ ಸಾಮಾನ್ಯ ಬಸ್ಗಳ ದರಕ್ಕಿಂತ ವಿಶೇಷ ಬಸ್ಗಳ ಟಿಕೆಟ್ ದರವು ಶೇ. 18 ರಿಂದ 20 ರಷ್ಟು ಹೆಚ್ಚಿದೆ. ಉದಾಹರಣೆಗೆ ಬೆಂಗಳೂರಿನಿಂದ ದಾವಣಗೆರೆಗೆ ರಾಜಹಂಸ ಸಾಮಾನ್ಯ ಬಸ್ ದರ 505 ರೂಪಾಯಿ ಇದೆ. ಇದೇ ಮಾರ್ಗದ ರಾಜಹಂಸ ಹಬ್ಬದ ವಿಶೇಷ ಬಸ್ ಟಿಕೆಟ್ ದರ 591 ರೂಪಾಯಿ ಇದೆ.
ಸೆಪ್ಟೆಂಬರ್ 18-19 ಗಣೇಶ ಹಬ್ಬ ಸೆಪ್ಟೆಂಬರ್ 17 ಭಾನುವಾರ ಸೆಪ್ಟೆಂಬರ್ 16 ರಂದು ಕೆಲಸ ಮಾಡಿ ಊರಿಗೆ ಹೋಗಲಿರುವ ಸರಕಾರಿ, ಖಾಸಗಿ ಕಂಪನಿ ನೌಕರರು ಈ ಕಾರಣಕ್ಕೆ ಶನಿವಾರದಿಂದಲ್ಲೇ ಜನ ತಮ್ಮ ತಮ್ಮ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇದ್ದ ಖಾಸಗಿ ಬಸ್ ಟಿಕೆಟ್ ದರವನ್ನು ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ 1500- 2500 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ.