ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! – ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದ ಸುರಕ್ಷತಾ ಪರಿಶೀಲನೆ ಮುಂದೂಡಿಕೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! – ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದ ಸುರಕ್ಷತಾ ಪರಿಶೀಲನೆ ಮುಂದೂಡಿಕೆ

ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಕಹಿ ಸುದ್ದಿಯೊಂದಿದೆ. ಕೆಆರ್‌ ಪುರ -ಬೈಯ್ಯಪ್ಪನಹಳ್ಳಿ ಮೆಟ್ರೋ ಮಾರ್ಗದ ತಪಾಸಣೆಯನ್ನು ಮತ್ತೆ ಮುಂದೂಡಲಾಗಿದೆ. ಇದರಿಂದಾಗಿ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವಿನ ರೈಲು ಓಡಾಟ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್‌ಎಸ್) ಬಹುನಿರೀಕ್ಷಿತ ಪರಿಶೀಲನೆಯನ್ನು ಮುಂದೂಡಲಾಗಿದೆ. ಮುಂದಿನ ತಪಾಸಣೆ ದಿನಾಂಕ ಯಾವಾಗ ಎಂದು ಇನ್ನೂ ನಿಗದಿಯಾಗಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ – ಸೆ. 15 ರ ನಂತರ ಈ ಎರಡು ಮಾರ್ಗಗಳಲ್ಲಿ ಸಂಚಾರ ಆರಂಭ?

ನಿಗದಿತ ಕಾರ್ಯಕ್ರಮದ ಪ್ರಕಾರ, ಸಿಎಮ್‌ಆರ್‌ಎಸ್ ಸೆ.13 ರಂದು ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂವರೆಗೆ ತಪಾಸಣೆ ನಡೆಸಿ ಬೆಳಿಗ್ಗೆ 9.45 ಕ್ಕೆ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಆಗಮಿಸಿ, ನಂತರ ಮೋಟಾರ್ ಟ್ರಾಲಿಯಲ್ಲಿ ಕೆಆರ್ ಪುರಂ ಕಡೆಗೆ ಹೊರಡಬೇಕಿತ್ತು. ಬೆಳಗ್ಗೆ 11.45 ರ ವೇಳೆಗೆ ತೆರೆದ ವೆಬ್ ಗರ್ಡರ್ ಸೇತುವೆಯನ್ನೂ ಪರಿಶೀಲಿಸಬೇಕಿತ್ತು. ಸಂಜೆ 4.40ಕ್ಕೆ ಸಿಎಂಆರ್‌ಎಸ್ ತಂಡ ಬೆನ್ನಿಗಾನಹಳ್ಳಿಯಿಂದ ಬೈಯಪ್ಪನಹಳ್ಳಿವರೆಗೆ ರೋಲಿಂಗ್ ಸ್ಟಾಕ್ ತಪಾಸಣೆ ನಡೆಸಿ, ಸಂಜೆ 6.30ರ ಸುಮಾರಿಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ಗೆ ಲಘು ಓಟದ ನಂತರ ತಪಾಸಣೆ ಮುಕ್ತಾಯಗೊಳಿಸಬೇಕಿತ್ತು. ಕೆಂಗೇರಿ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗದ ಪರಿಶೀಲನೆಯ ಸಮಯ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ಈ ಹಿಂದೆ ಸಿಎಂಆರ್‌ಎಸ್‌ಗೆ ಸೆಪ್ಟೆಂಬರ್ 15 ರಿಂದ ಕಾರ್ಯಾಚರಣೆಗೆ ಮಾರ್ಗವನ್ನು ತೆರೆಯುವ ಸಲುವಾಗಿ ತಪಾಸಣೆ ಪ್ರಕ್ರಿಯೆಯನ್ನು ಬೇಗನೆ ಮುಗಿಸುವಂತೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮನವಿ ಮಾಡಿದ್ದರು.

ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಸಂಪರ್ಕ ಮತ್ತು ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ವಿಸ್ತರಣೆಯು ಕ್ರಮವಾಗಿ ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮಕ್ಕೆ ಸಂಪರ್ಕಿಸುವ ಮೆಟ್ರೋದ ನೇರಳೆ ಮಾರ್ಗದ ಭಾಗವಾಗಿದೆ. ಕಾರ್ಯಾಚರಣೆಗಳು ಪ್ರಾರಂಭವಾದ ನಂತರ, ಪ್ರಯಾಣಿಕರ ಸಂಖ್ಯೆ 75,000 ರಿಂದ ಸುಮಾರು 1 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಈ ತಪಾಸಣೆ ಮುಂದೆ ಹೋಗಿರುವ ಕಾರಣ ಈ ಭಾಗದಲ್ಲಿ ಮೆಟ್ರೋ ಓಡಾಟ ಕೂಡ ತಡವಾಗುವ ಸಾಧ್ಯತೆ ಇದೆ. ಆದರೂ ಸಾಧ್ಯವಾದಷ್ಟು ಬೇಗನೆ ಕಾರ್ಯಾಚರಣೆ ಆರಂಭಿಸಲು ಬಿಎಂಆರ್ ಸಿಎಲ್ ಸಜ್ಜಾಗಿದ್ದು, ತಪಾಸಣೆ ಮುಗಿದ ತಕ್ಷಣ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

Shwetha M