ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ₹5 ಕೋಟಿ ವಂಚನೆ – ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅರೆಸ್ಟ್
ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆ ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಕುಂದಾಪುರ ಹೇಳಿದಂತೆ ಆಗಾಗ ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಭೀತಿ! – ರಾಜ್ಯದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚನೆ
ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ ಕೆಲವರನ್ನು ತೋರಿಸಿ ಇವರಿಗೆ ಹೈಕಮಾಂಡ್ ನಾಯಕರ ಜೊತೆ ನಿಕಟ ಸಂಪರ್ಕವಿದ್ದು, ಇವರು ಹೇಳಿದರೆ ಟಿಕೆಟ್ ಕೊಡಿಸುತ್ತಾರೆ ಎಂದು ನಂಬಿಸಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿ ಅವರು ಟಿಕೆಟ್ ಸಿಗತ್ತೆ ಅನ್ನುವ ಆಸೆಗೆ ಕೇಳಿದಷ್ಟು ಹಣ ಕೊಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗೆ ಚೈತ್ರಾ ಕುಂದಾಪುರ ಒಟ್ಟು 5 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪ್ ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದಾರೆ. ಗೋವಿಂದಬಾಬು ಪೂಜಾರಿ ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಪ್ರಕರಣದ ಎ2 ಆರೋಪಿ, ಕಡೂರು ಮೂಲದ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಗಗನ್ ಕಡೂರು ಎಂಬುವರನ್ನು ಪೊಲೀಸರು ಬಂಧಸಿದ್ದಾರೆ. ಗಗನ್ ಕಡೂರು ಜೈತ್ರ ಕುಂದಾಪುರ ಆಪ್ತನಾಗಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿ ಚಿಕ್ಕಮಗಳೂರು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಆದೇಶ ಹೊರಡಿಸಿದ್ದಾರೆ. ಗೋವಿಂದಬಾಬು ಒಂದು ತಿಂಗಳ ಹಿಂದೆಯೇ ಗಗನ್ ಬಗ್ಗೆ ದೂರು ನೀಡಿದ್ದರು.