ಮಕ್ಕಳು ಕನಸಿನಲ್ಲಿ ಬರ್ತಿದ್ದಾರೆ ಎಂದು ಜೈಲಿನಿಂದ ಆರೋಪಿ ಎಸ್ಕೇಪ್ – ಮತ್ತೆ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ ಪೋಷಕರು
ಕಳ್ಳತನ, ಕೊಲೆ ಸೇರಿದಂತೆ ಹಲವು ಕ್ರೈಂಗಳನ್ನ ಮಾಡಿ ಆರೋಪಿಗಳು ಜೈಲು ಸೇರುತ್ತಾರೆ. ಬಳಿಕ ವಿಚಾರಣೆ ನಡೆಸುವ ನ್ಯಾಯಾಲಯ ಆರೋಪ ಸಾಬೀತಾದ ಬಳಿಕ ಅಪರಾಧ ಕೃತ್ಯದ ಆಧಾರದ ಮೇಲೆ ಶಿಕ್ಷೆ ಪ್ರಮಾಣ ಪ್ರಕಟಿಸುತ್ತದೆ. ಆದರೆ ಇಲ್ಲಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಜೈಲಿನಿಂದ ಎಸ್ಕೇಪ್ ಆಗಿದ್ದ. ಆದರೆ ಆತನ ಪೋಷಕರು ಮಾದರಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : ಕೆಟ್ಟು ನಿಂತಿದ್ದ ಬಸ್ಗೆ ಟ್ರಕ್ ಡಿಕ್ಕಿ – ಸ್ಥಳದಲ್ಲೇ 11 ಮಂದಿ ಸಾವು
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಜೈಲಿನಿಂದ ಎಸ್ಕೇಪ್ ಆಗಿದ್ದ ಅನ್ವರ್ ಪಾಷಾ ಎಂಬ ಆರೋಪಿಯನ್ನು ಆತನ ಪೋಷಕರು (parents) ಮತ್ತೆ ಕರೆತಂದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ವರದಿಯಾಗಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಇದೇ ಸೆಪ್ಟೆಂಬರ್ 3 ರಂದು ದೇವದುರ್ಗ ಪಟ್ಟಣದಲ್ಲಿರುವ ಸಬ್ ಜೈಲಿನಿಂದ ಆರೋಪಿ ಅನ್ವರ್ ಪಾಷಾ ಎಸ್ಕೇಪ್ ಆಗಿದ್ದ. ತನ್ನಿಬ್ಬರು ಮಕ್ಕಳ ನೆನಪು ಕಾಡುತ್ತಿತ್ತು, ಜೊತೆಗೆ ಆಗಾಗ ಮಕ್ಕಳು ಕನಸಿನಲ್ಲಿ ಬರ್ತಿದ್ದ ಹಿನ್ನೆಲೆ ಅವರನ್ನು ನೋಡಲು ಎಸ್ಕೇಪ್ ಆಗಿದ್ದೆ ಅಂತ ಆರೋಪಿ ಅನ್ವರ್ ಪಾಷಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಅನ್ವರ್ ಪಾಷಾ ರಾಯಚೂರಿನ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿದ್ದ ಕೊಲೆ ಅದಾಗಿತ್ತು. ಪ್ರಿಯತಮೆಯ ಪತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿ ಅನ್ವರ್ ಪಾಷಾ. ವಿಜಯನಗರದ ಹಗರಿ ಬೊಮ್ಮನಹಳ್ಳಿ ಮೂಲದ ಆರೋಪಿ ಅನ್ವರ್ ಪಾಷಾ ಪ್ರಸ್ತುತ ದೇವದುರ್ಗ ಉಪ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.