ಶಾರ್ಪ್ ಶೂಟರ್ ವೆಂಕಟೇಶ್ ಬಲಿ ಪಡೆದ ಭೀಮನಿಗೆ ಚಿಕಿತ್ಸೆ ನೀಡುತ್ತಿಲ್ಲ ಅರಣ್ಯ ಇಲಾಖೆ – ‘ಭೀಮ’ನನ್ನು ಉಳಿಸಿ ಎಂದು ಶುರುವಾಯ್ತು ಅಭಿಯಾನ

ಶಾರ್ಪ್ ಶೂಟರ್ ವೆಂಕಟೇಶ್ ಬಲಿ ಪಡೆದ ಭೀಮನಿಗೆ ಚಿಕಿತ್ಸೆ ನೀಡುತ್ತಿಲ್ಲ ಅರಣ್ಯ ಇಲಾಖೆ – ‘ಭೀಮ’ನನ್ನು ಉಳಿಸಿ ಎಂದು ಶುರುವಾಯ್ತು ಅಭಿಯಾನ

ಹೆಸರಿಗೆ ಭೀಮ. ಕಾಡಾನೆಗಳೆಲ್ಲಾ ಸೇರಿ ಭೀಮನಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಹೀಗಾಗಿ ಮೈತುಂಬಾ ಗಾಯ. ಆಹಾರ ಹುಡುಕಿಕೊಳ್ಳಲು ಕೂಡಾ ಸಾಧ್ಯವಾಗದ ಪರಿಸ್ಥಿತಿ. ನಡೆದರೆ ನೋವು ಜಾಸ್ತಿ. ನಡೆಯದೆ ಇದ್ದರೆ ಹೊಟ್ಟೆ ಹಸಿವು ಜಾಸ್ತಿ. ಹೊಟ್ಟೆ ತುಂಬಿಸಿಕೊಳ್ಳಲು ಆಗುತ್ತಿಲ್ಲ. ಅರಣ್ಯ ಇಲಾಖೆಗೆ ಆನೆಯ ವೇದನೆಯೂ ಬೇಕಿಲ್ಲ. ಯಾಕೆಂದರೆ, ಗಾಯಗೊಂಡಿದ್ದ ಭೀಮನಿಗೆ ಚಿಕಿತ್ಸೆ ನೀಡಲು ಬಂದಾಗಲೇ ದುರಂತವೊಂದು ನಡೆದುಹೋಗಿತ್ತು. ಹೀಗಾಗಿ ಅರಣ್ಯ ಇಲಾಖೆ ಕೂಡಾ ಭೀಮನ ಬಗ್ಗೆ ಕಾಳಜಿ ತೋರುತ್ತಿಲ್ಲ. ಇಲ್ಲಿ ಶಾರ್ಪ್ ಶೂಟರ್ ಬಲಿಯಾಗಿದ್ದು ಆನೆಗೆ ಅನ್ನೋದು ಸತ್ಯವೇ. ಅಂದು ಬಲಿ ಪಡೆದ ತಪ್ಪಿಗೆ ಇವತ್ತಿಗೂ ಭೀಮ ಕಾಡಿನ ಮಧ್ಯೆ ನರಳಾಡುತ್ತಲೇ ಇದ್ದಾನೆ. ಇದೇ ನರಳಾಟವೇ ಅಂದಿನ ದುರಂತಕ್ಕೂ ಕಾರಣ ಅನ್ನೋ ಸತ್ಯವೂ ಎಲ್ಲರಿಗೂ ಗೊತ್ತಿದೆ.

ಇದನ್ನೂ ಓದಿ: ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

ಕಾಡಿನಲ್ಲಿ ಗಾಯಗೊಂಡು ನರಳಾಡುತ್ತಿದ್ದ ಭೀಮನಿಗೆ 40 ವರ್ಷ. ಕಾಡಾನೆಗಳ ಜೊತೆ ಕಾದಾಟ ನಡೆಸಿದ ಭೀಮ ಗಾಯಗೊಂಡಿದ್ದ. ಭೀಮಾ ಆನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಹೋದಾಗಲೇ ಶಾರ್ಪ್ ಶೂಟರ್ ವೆಂಕಟೇಶ್ ಅವರನ್ನು ಭೀಮ ತುಳಿದು ಸಾಯಿಸಿದ್ದ. ಆಗಸ್ಟ್ 31ರಂದು ಈ ಘಟನೆ ನಡೆದಿತ್ತು. ಶಾರ್ಪ್ ಶೂಟರ್ ವೆಂಕಟೇಶ್ ಸಾವಿನ ಬಳಿಕ ಭೀಮನಿಗೆ ಚಿಕಿತ್ಸೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ತೀವ್ರ ನೋವಿನಿಂದ ನಡೆಯಲು ಸಾಧ್ಯವಾಗದೆ, ಆಲೂರಿನ ಕಾಫಿ ಎಸ್ಟೇಟ್‌ನಲ್ಲಿ ಒಂದೆರಡು ದಿನಗಳಿಂದ ಒಂದೇ ಸ್ಥಳದಲ್ಲಿ ಆನೆ ನಿಂತು ರೋಧಿಸುವುದನ್ನು ಸ್ಥಳೀಯರು ಕಂಡು ಮರುಕ ಪಟ್ಟಿದ್ದಾರೆ.

ಇದೀಗ ಸ್ಥಳೀಯರು ಗಾಯಗೊಂಡಿರುವ ಆನೆಗೆ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಆನೆಯು ಸಂಕಟ ಪಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾಡಾನೆಯ ಬೆನ್ನಿನ ಹಿಂಭಾಗದಲ್ಲಿ ಗಾಯ ಕೊಳೆಯುತ್ತಿದ್ದು, ಚಿಕಿತ್ಸೆ ನೀಡದಿದ್ದರೆ ಭೀಮ ಬದುಕುವುದು ಕಷ್ಟ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭೀಮನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅರಣ್ಯ ಇಲಾಖೆಗೆ ಕಾಡಾನೆಗಳನ್ನು ಸೆರೆಹಿಡಿಯುವುದು ಕಷ್ಟವೇನಲ್ಲ. ಅದೆಷ್ಟೋ ಆನೆಗಳನ್ನು ಸೆರೆಹಿಡಿದಿದ್ದಾರೆ. ಆದರೆ, ಭೀಮನ ವಿಚಾರದಲ್ಲಿ ಯಾಕೆ ಹೀಗಾಗುತ್ತಿದೆ. ಅಂದು ಕೂಡಾ ಶಾರ್ಪ್ ಶೂಟರ್ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.

Sulekha