14 ದಿನಗಳ ನ್ಯಾಯಾಂಗಬಂಧನ – ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಆಂಧ್ರಪ್ರದೇಶ ಬಂದ್
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಚಂದ್ರಬಾಬು ನಾಯ್ಡು ವಿರುದ್ಧ 371 ಕೋಟಿ ರೂಪಾಯಿ ಮೊತ್ತದ ಆಂಧ್ರಪ್ರದೇಶ ಕೌಶಲ ಅಭಿವೃದ್ಧಿ ಹಗರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪವಿದೆ. ಬಂಧನಕ್ಕೊಳಗಾದ ಒಂದು ದಿನದ ನಂತರ, ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ : 3 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೆಂಘೀಯಿಂದ 7 ಜನ ಸಾವು – ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಅನಂತಪುರ ಜಿಲ್ಲೆಯಲ್ಲಿ ಕಿಯಾದಂತಹ ಕೈಗಾರಿಕೆಗಳ ಸಮೀಪದಲ್ಲಿ ಇರುವ ಶೈಕ್ಷಣಿಕ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮತ್ತು ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡುವ ಉದ್ದೇಶದಿಂದ 2014ರಲ್ಲಿ ಆಂಧ್ರ ಪ್ರದೇಶ ಕೌಶಲ ಅಭಿವೃದ್ಧಿ ನಿಗಮ ರಚಿಸುವುದಕ್ಕೆ ಸಂಬಂಧಿಸಿದಂತೆ ಹಗರಣ ನಡೆದ ಆರೋಪ ಕೇಳಿಬಂದಿತ್ತು. ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳ ಬಂಧನಕ್ಕೂ ಮುನ್ನ ಜೈಲಿನಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಟಿಡಿಪಿ ಮುಖ್ಯಸ್ಥರನ್ನು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಟಿಡಿಪಿ ಕಾರ್ಯಕರ್ತರು ವಿಜಯವಾಡ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜಮಂಡ್ರಿ ಪೊಲೀಸರು ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ಅವರ ಬಂಧನ ಖಂಡಿಸಿ ಸೋಮವಾರ ಆಂಧ್ರಪ್ರದೇಶದಲ್ಲಿ ಬಂದ್ ಆಚರಿಸಲಾಗುತ್ತಿದೆ.
ಚಂದ್ರಬಾಬು ನಾಯ್ಡು ವಿರುದ್ಧ ಇರುವ ಆರೋಪಗಳು
ರಾಜ್ಯದಲ್ಲಿನ ನಿರುದ್ಯೋಗಿ ಯುವ ಜನರಿಗೆ ತರಬೇತಿ ನೀಡಲು ಎಪಿಎಸ್ಎಸ್ಡಿಸಿ ಹೆಸರಿನ ಅಡಿಯಲ್ಲಿ ನಡೆದ 371 ಕೋಟಿ ರೂ ಮೊತ್ತದ ಬೃಹತ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಅವರು ನಿಖರವಾಗಿ ಈ ಹಗರಣವನ್ನು ಯೋಜಿಸಿ, ನಿರ್ದೇಶಿಸಿ ಮತ್ತು ಕಾರ್ಯಗತಗೊಳಿಸಿದ್ದರು ಎಂದು ಹೇಳಲಾಗಿದೆ.
ನಾಯ್ಡು ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರವು ಜರ್ಮನ್ ಎಂಜಿನಿಯರಿಂಗ್ ದಿಗ್ಗಜ ಸೀಮೆನ್ಸ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಯೋಜನೆಯಲ್ಲಿ ಸೀಮೆನ್ಸ್ ಯಾವುದೇ ಹಣ ಹೂಡಿಕೆ ಮಾಡದೆ ಇದ್ದರೂ, ಮೂರು ತಿಂಗಳ ಒಳಗೆ ಐದು ಕಂತುಗಳಲ್ಲಿ 371 ಕೋಟಿ ರೂ ಮೊತ್ತವನ್ನು ಪಾವತಿಸಲಾಗಿತ್ತು. ಯೋಜನೆಯ ಒಟ್ಟು ವೆಚ್ಚ 3,356 ಕೋಟಿ ರೂ ಮೊತ್ತದಲ್ಲಿ ಶೇ 10ರಷ್ಟನ್ನು ಆಂಧ್ರಪ್ರದೇಶ ಸರ್ಕಾರ ನೀಡಲಿದೆ ಎಂದು ಎಂಒಯುದಲ್ಲಿ ಹೇಳಲಾಗಿತ್ತು.
ಗಮನಿಸಬೇಕಾದ ಸಂಗತಿಯೆಂದರೆ, ಆಗಿನ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಗಿನ ಮುಖ್ಯ ಕಾರ್ಯದರ್ಶಿ ಯಾವುದೇ ಕಡತಗಳಿಗೆ ಸಹಿ ಹಾಕಿರಲಿಲ್ಲ. ಇದರಿಂದಾಗಿ ಯೋಜನೆಯ ಪಾರದರ್ಶಕತೆ ಕುರಿತಾಗಿ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆ ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಗಳು ನಡೆದಿದ್ದವು ಎಂದು ವರದಿಗಳು ಹೇಳಿದ್ದವು.
ಸೀಮೆನ್ಸ್, ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾ ಲಿ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈ ಲಿ ಒಳಗೊಂಡ ಸಮಿತಿ ಜತೆಗಿನ ಪಾಲುದಾರಿಕೆಯೊಂದಿಗೆ ಎಪಿಎಸ್ಎಸ್ಡಿಸಿಯು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಿತ್ತು. ಕೌಶಲಾಭಿವೃದ್ಧಿಯ ಆರು ಕೇಂದ್ರಗಳನ್ನು ನಿರ್ಮಿಸುವ ಹೊಣೆಯನ್ನು ಸೀಮೆನ್ಸ್ಗೆ ವಹಿಸಲಾಗಿತ್ತು.
ಜಾರಿ ನಿರ್ದೇಶನಾಲಯ ನಡೆಸಿದ ತನಿಖೆ ಪ್ರಕಾರ, ಆಂಧ್ರಪ್ರದೇಶ ಸರ್ಕಾರವು ಯಾವುದೇ ಪ್ರಕ್ರಿಯೆ ಪಾಲಿಸದೆ 371 ಕೋಟಿ ರೂ ಬಿಡುಗಡೆ ಮಾಡುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿತ್ತು. ಅಲ್ಲದೆ ಅಲ್ಲೀಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈ ಲಿ., ನಾಲೆಡ್ಜ್ ಪೋಡಿಯಂ, ಕ್ಯಾಂಡೆನ್ಸ್ ಪಾರ್ಟ್ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ವಿವಿಧ ನಕಲಿ ಕಂಪೆನಿಗಳಿಗೆ ಕೌಶಲಾಭಿವೃದ್ಧಿಯಲ್ಲಿ ಯಾವುದೇ ಸ್ಪಷ್ಟ ಹೂಡಿಕೆ ವಾಪಸಾತಿ ಇಲ್ಲದೆ ಹೆಚ್ಚುವರಿಯಾಗಿ 241 ಕೋಟಿ ರೂ ಮೊತ್ತದ ಹಣವನ್ನು ವರ್ಗಾಯಿಸಲಾಗಿತ್ತು.
ಹಣಕಾಸು ಇಲಾಖೆ ಅಧಿಕಾರಿಗಳ ಆಕ್ಷೇಪದ ನಡುವೆಯೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡಲೇ ಹಣ ಬಿಡುಗಡೆ ಮಾಡಲು ಆದೇಶಿಸಿದ್ದರು.
ಈ ಅನುದಾನಕ್ಕೆ ಸಂಬಂಧಿಸಿದಂತೆ ನಕಲಿ ಕಂಪೆನಿಗಳ ಮೂಲಕ 70ಕ್ಕೂ ಅಧಿಕ ಹಣ ವರ್ಗಾವಣೆಗಳು ನಡೆದಿದ್ದವು. ಇದರಿಂದಾಗಿ ಪ್ರಕರಣ ಮತ್ತಷ್ಟು ಜಟಿಲವಾಗಿತ್ತು.
ಸರ್ಕಾರದ ಒಳಗಿನ ಮಾಹಿತಿದಾರರು ಕೌಶಲ ಅಭಿವೃದ್ಧಿ ಹಗರಣದ ಬಗ್ಗೆ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಮಾಹಿತಿ ನೀಡಿದ್ದರು. 2018ರಲ್ಲಿ ಮತ್ತೆ ಈ ಬಗ್ಗೆ ವರದಿ ನೀಡಲಾಗಿತ್ತು. ಈ ಆರೋಪಗಳು ಸಮಗ್ರವಾಗಿಲ್ಲ ಹಾಗೂ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ನಾಶಪಡಿಸಲಾಗಿದೆ ಎಂದು ಆರಂಭಿಕ ತನಿಖೆಗಳು ತಿಳಿಸಿದ್ದವು.