40ನೇ ಫ್ಲೋರ್‌ನಿಂದ ಒಮ್ಮೆಲೆ ನೆಲಕ್ಕೆ ಕುಸಿದ ಲಿಫ್ಟ್ – 7 ಕಾರ್ಮಿಕರು ಸಾವು

40ನೇ ಫ್ಲೋರ್‌ನಿಂದ ಒಮ್ಮೆಲೆ ನೆಲಕ್ಕೆ ಕುಸಿದ ಲಿಫ್ಟ್ – 7 ಕಾರ್ಮಿಕರು ಸಾವು

ಮುಂಬೈ: 40 ನೇ ಮಹಡಿಯಿಂದ ನೆಲಮಾಳಿಗೆಗೆ ಲಿಫ್ಟ್‌ ಕುಸಿದು ಬಿದ್ದಿದ್ದು, ಸುಮಾರು 7 ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಥಾಣೆಯ ಬಾಲ್ಕಮ್‌ ಪ್ರದೇಶದಲ್ಲಿ ಸುಮಾರು 40 ಅಂತಸ್ಥಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇತ್ತೀಚೆಗಷ್ಟೇ ಎಲ್ಲಾ ಕೆಲಸಗಳು ಮುಗಿದು ಕ್ಯೂರಿಂಗ್‌ ಕೆಲಸ ನಡೆಯುತ್ತಿದೆ. ಭಾನುವಾರ ಸಂಜೆ ಕಾರ್ಮಿಕರು ನೀರು ಹರಿಸಿ ಮೇಲಿನ ಅಂತಸ್ಥಿನಿಂದ ಕೆಳಕ್ಕೆ ಲಿಫ್ಟ್‌ನಲ್ಲಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 7 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿಥ್ಲೇಶ್ (35), ಕರಿದಾಸ್ (38) ಮತ್ತು ಸುನೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಾಂಕ ನಿಗದಿ – ಜನವರಿಯಲ್ಲೇ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ಲಿಫ್ಟ್ ಅಪಘಾತ ಬಹು ದೊಡ್ಡ ದುರಂತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಲಿಫ್ಟ್‌ನ ಕೇಬಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana