ದೋಸ್ತಿ ಮಾಡಿಕೊಂಡರೂ ಹಾಲಿ ಸಂಸದರಿರುವ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಹಿಂದೇಟು – ದಳ ಕಮಲ ಮೈತ್ರಿಗೆ ಮತ್ತಷ್ಟು ಸವಾಲು
2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಜೆಡಿಎಸ್ಗೆ ನಾಲ್ಕು ಸೀಟು ಬಿಟ್ಟು ಕೊಡಲು ಅಮಿತ್ ಶಾ ಹೇಳಿದ್ದಾಗಿ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಈ ಮೈತ್ರಿ ಮಾತುಕತೆ ಯಶಸ್ವಿಯಾದರೆ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸೀಟು ಗೆಲ್ಲದಂತೆ ಮಾಡಲು ಅನುಕೂಲವಾಗಲಿದೆ ಎಂದು ಲೆಕ್ಕಾಚಾರವಾಗಿದೆ.
ಇದನ್ನೂ ಓದಿ : ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ
ಅಸಲಿ ಸವಾಕು ಇರುವುದು ಇಲ್ಲಿಯೇ. ಯಾಕೆಂದರೆ ಜೆಡಿಎಸ್ ಕೇಳಿದಷ್ಟು ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ರಾಜ್ಯ ನಾಯಕರು ಒಲವು ಹೊಂದಿಲ್ಲ ಎಂದು ತಿಳಿದುಬಂದಿದೆ. ಕನಿಷ್ಠ 2 ಹಾಗೂ ಗರಿಷ್ಠ 3 ಸೀಟುಗಳನ್ನು ಮಾತ್ರ ಬಿಟ್ಟು ಕೊಡಲು ಒಲವು ಹೊಂದಿದ್ದಾರೆ. ಆದರೆ, ಮೈತ್ರಿ ಯಶಸ್ವಿಯಾಗಬೇಕಾದರೆ ಸೀಟುಗಳ ಹಂಚಿಕೆಯಲ್ಲಿ ತೃಪ್ತಿ ತರಬೇಕು. ಒಂದೊಮ್ಮೆ ಹೆಚ್ಚಿನ ಸ್ಥಾನಗಳಿಗಾಗಿ ಜೆಡಿಎಸ್ ಬೇಡಿಕೆ ಇಟ್ಟರೆ ಏನು ಮಾಡೋದು ಎಂಬ ಚಿಂತೆ ಬಿಜೆಪಿ ನಾಯಕರನ್ನು ಕಾಡಿದೆ. ಹೆಚ್ಚಿನ ಕ್ಷೇತ್ರಗಳಿಗೆ ಜೆಡಿಎಸ್ ಒತ್ತಡ ಹೇರುವ ಸಾಧ್ಯತೆ ಹಿನ್ನೆಲೆ ಬಿಜೆಪಿ ಮೆಗಾ ಪ್ಲಾನ್ ಹಾಕಿಕೊಂಡಿದೆ. ಜೆಡಿಎಸ್ ಕೇಳಿದಷ್ಟು ಐದಾರು ಕ್ಷೇತ್ರಗಳನ್ನು ನೇರವಾಗಿ ಬಿಟ್ಟುಕೊಡಲು ಸಿದ್ದವಿಲ್ಲದ ರಾಜ್ಯ ಬಿಜೆಪಿ ನಾಯಕರು, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವ ಫಾರ್ಮುಲಾ ಹಾಕಿಕೊಂಡಿದ್ದಾರೆ.
ಸದ್ಯ, ಮೂರು ಕ್ಷೇತ್ರಗಳನ್ನ ಕಮಲ ದಳ ನಾಯಕರು ಸರಿ ಮಾಡಿಕೊಂಡಿದ್ದಾರೆ. ಎರಡು ಕ್ಷೇತ್ರಗಳು ಮಾತ್ರ ಕಗ್ಗಾಂಟಾಗಿದೆ. ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮಾತುಕತೆ ಆಗಿದ್ದು, ಇಲ್ಲಿ ಜೆಡಿಎಸ್ ಸ್ಪರ್ಧೆ ಖಚಿತವಾಗಿದೆ. ಇದರ ಜೊತೆಗೆ ಮಂಡ್ಯ ಮತ್ತು ತುಮಕೂರು ಕ್ಷೇತ್ರದ ಬಗ್ಗೆ ಜೆಡಿಎಸ್ ಒಲವು ಹೊಂದಿದೆ. ಆದರೆ, ಬಿಜೆಪಿ ವರಿಷ್ಠರು ಮಂಡ್ಯ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತಿಳಿಸಿಲ್ಲ. ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಬಿಜೆಪಿಗೆ ವಿಧಾನಸಭಾ ಚುನಾವಣೆ ವೇಳೆ ಬೆಂಬಲ ಘೋಷಣೆ ಮಾಡಿದ್ದಾರೆ. ಹಾಗಾಗಿ ಸುಮಲತಾಗೆ ಪರ್ಯಾಯ ಕ್ಷೇತ್ರ ನೀಡಿದರೆ ಮಂಡ್ಯ ಜೆಡಿಎಸ್ಗೆ ಸಿಗಬಹುದು. ಆದರೆ, ತುಮಕೂರಿನಲ್ಲಿ ಬಿಜೆಪಿ ಸಂಸದ ಇದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್ಗೆ ಕ್ಷೇತ್ರ ಬಿಟ್ಟು ಕೊಟ್ಟರೆ ಕ್ಷೇತ್ರ ಕಾಂಗ್ರೆಸ್ ಪಾಲು ಆಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದೆ.