ಬಿಎಂಟಿಸಿ ನೈಟ್ ಸರ್ವಿಸ್ ಬಸ್‌ಗಳ ಟಿಕೆಟ್ ದರ ಭಾರಿ ಇಳಿಕೆ – ಇನ್ನು ಮುಂದೆ ಹಗಲು, ರಾತ್ರಿ ಏಕರೂಪ ದರ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಖುಷಿ ಸುದ್ದಿಯಿದೆ. ರಾತ್ರಿ ವೇಳೆ ಸಂಚರಿಸಲುವ ಬಿಎಂಟಿಸಿ ಬಸ್‌ಗಳ ಹೆಚ್ಚುವರಿ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದ್ದು, ಸೆಪ್ಟೆಂಬರ್ 6 ರ ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆಯಾಗಿದೆ. ಈ ಮೂಲಕ ಇನ್ನು ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಒಂದೇ ದರ ಪಡೆಯಲಾಗುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ – ಆಯಾ ಭಾಗದ ಆಹಾರ ಪದ್ಧತಿಯಂತೆ ಊಟ ನೀಡಲು ಪ್ಲ್ಯಾನ್
ಬಿಎಂಟಿಸಿ ರಾತ್ರಿ ಹೊತ್ತಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೆರವಾಗಲೆಂದು ನೈಟ್ ಸರ್ವೀಸ್/ರಾತ್ರಿ ಸೇವೆ ಬಸ್‌ಗಳನ್ನು ರಸ್ತೆಗೆ ಇಳಿಸಿತ್ತು. ರಾತ್ರಿ 11 ರಿಂದ ಬೆಳಗಿನ ಜಾವ 4 ಗಂಟೆಯವರೆಗೂ ಸಂಚರಿಸುತ್ತಿದ್ದ ಈ ಬಸ್‌ಗಳ ದರವು ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಿತ್ತು. ಇದೀಗ ಒಂದೂವರೆ ಪಟ್ಟು ದರವನ್ನು ರದ್ದು ಮಾಡಲಾಗಿದೆ.
ಏಕರೂಪ ದರ ನಿಗದಿ ಬಗ್ಗೆ ಬಿಎಂಟಿಸಿ ಆದೇಶ ಹೊರಡಿಸಿದೆ. ಬೆಂಗಳೂರು ನಗರದಲ್ಲಿ ತಡರಾತ್ರಿ ಹಾಗೂ ಮುಂಜಾನೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ರಾತ್ರಿ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರಿಗೆ ಏಕರೂಪದ ಪ್ರಯಾಣ ದರವನ್ನು ವಿಧಿಸುವ ನಿಟ್ಟಿನಲ್ಲಿ, ಸಂಸ್ಥೆಯಿಂದ ಕಾರ್ಯಾಚರಣೆ ಮಾಡುವ ರಾತ್ರಿ ಸೇವೆ ಸಾರಿಗೆಗಳಿಗೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ಸೆಪ್ಟೆಂಬರ್ 6 ರಿಂದ ಜಾರಿಗೆ ಬರುವಂತೆ ನಿಗದಿಪಡಿಸಲಾಗಿದೆ ಎಂದು ಆದೇಶದಲ್ಲಿ ಬಿಎಂಟಿಸಿ ತಿಳಿಸಿದೆ.
ಎಲ್ಲೆಲ್ಲಿ ನೈಟ್ ಸರ್ವೀಸ್ ಇತ್ತು?
ನಗರದ ಪ್ರಮುಖ ಬಡಾವಣೆಗಳಿಂದ ವಿಮಾನ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆಗೆ, ಯಶವಂತಪುರ ಟಿಟಿಎಂಸಿ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ವಿಮಾನ ನಿಲ್ದಾಣದಿಂದ ನಗರ ವಿವಿಧ ಬಡಾವಣೆಗಳಿಗೆ ಬಿಎಂಟಿಸಿ ರಾತ್ರಿ ಸೇವೆ ಬಸ್‌ಗಳನ್ನು ಓಡಿಸುತ್ತಿತ್ತು.