ನಾನು ಇದೇ ಕಾರಣಕ್ಕೆ ಸಸ್ಯಾಹಾರಿಯಾದೆ! – ಜೀವನದ ಅತ್ಯುತ್ತಮ ನಿರ್ಧಾರಗಳ ಬಗ್ಗೆ ಹಂಚಿಕೊಂಡ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಕಿಂಗ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳು ಇದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳಿಂದಾಗಿಯೇ ಅವರು ಉನ್ನತ ಸ್ಥಾನದಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು. ಅವರ ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಜೀವನದ ಅತ್ಯುತ್ತಮ ನಿರ್ಧಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಾನು ಸಸ್ಯಾಹಾರಿ ಯಾಕೆ ಆದೇ ಎಂಬುವುದರ ಕುರಿತು ಕೂಡ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವೇಳೆ ಜೀವನದ ಅತ್ಯುತ್ತಮ ನಿರ್ಧಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ಸಸ್ಯಾಹಾರಿಯಾಗಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಾಂಸಾಹಾರ ಸೇವನೆಯಿಂದ ನನ್ನ ದೇಹದಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ನನಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ವೈದ್ಯಕೀಯ ಪರೀಕ್ಷೆ ವೇಳೆ ನನ್ನ ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಮ್ಲವನ್ನು ಹೊಂದಿದೆ ಎಂದು ಗೊತ್ತಾಯಿತು. ಮುಖ್ಯವಾಗಿ ನನ್ನ ಆಹಾರದಲ್ಲಿ ಹಾಗೂ ನನ್ನ ಹೊಟ್ಟೆಯಲ್ಲಿ ತುಂಬಾ ಆಮ್ಲೀಯತೆಯಿತ್ತು. ನಾನು ಕ್ಯಾಲ್ಸಿಯಂ, ಮೆಗ್ನೀಷಿಯಂ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರೂ ಸಹ ಆಮ್ಲೀಯತೆಯ ಪ್ರಮಾಣ ಜಾಸ್ತಿಯಿತ್ತು. ಇದರಿಂದ ನನಗೆ ಒಂದು ಟ್ಯಾಬ್ಲೆಟ್ ಸಾಕಾಗುತ್ತಿರಲಿಲ್ಲ. ಅಲ್ಲದೆ ನನ್ನ ಮೂಳೆಗಳೂ ದುರ್ಬಲವಾಗಿದ್ದವು ಎಂದು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಈ ಸಮಸ್ಯೆಗಳಿಂದಾಗಿ 2018ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ನಾನು ಮಾಂಸಾಹಾರ ಸೇವನೆಯನ್ನು ತ್ಯಜಿಸಿದೆ. ಮಾಂಸಾಹಾರಿಯಾಗುವುದಕ್ಕಿಂತ ಸಸ್ಯಾಹಾರಿಯಾಗಿರುವುದು ಉತ್ತಮ ಎಂಬುದು ನನ್ನ ಅನಿಸಿಕೆ ಎಂದು ಇದೇ ವೇಳೆ ವಿರಾಟ್ ಕೊಹ್ಲಿ ತಿಳಿಸಿದರು. ಅಲ್ಲದೆ ನಾನು ಈ ಹಿಂದೆಯೇ ಸಸ್ಯಾಹಾರಿಯಾಗಬೇಕಿತ್ತು. ಈ ನಿರ್ಧಾರವನ್ನು ಮೊದಲೇ ಏಕೆ ತೆಗೆದುಕೊಳ್ಳಲಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಯೋಚಿಸುತ್ತೇನೆ?. ಏಕೆಂದರೆ ನಾನು ಈ ನಿರ್ಧಾರವನ್ನು 2-3 ವರ್ಷಗಳ ಹಿಂದೆ ಮಾಡಬೇಕಾಗಿತ್ತು. ಏಕೆಂದರೆ ಈ ನಿರ್ಧಾರವು ಎಲ್ಲವನ್ನೂ ಸಂಪೂರ್ಣವಾಗಿ ಬದಲಾಯಿಸಿತು. ಈ ನಿರ್ಧಾರದಿಂದ ನಿಮಗೂ ಒಳ್ಳೆಯದಾಗುತ್ತದೆ. ನೀವು ಚೆನ್ನಾಗಿ ಯೋಚಿಸುತ್ತಿರಬೇಕು. ದೇಹ ಹಗುರವಾದ ಅನುಭವವಾಗುತ್ತದೆ. ನೀವು ಹೆಚ್ಚು ಧನಾತ್ಮಕವಾಗಿರುತ್ತೀರಿ ಎಂದು ಕೊಹ್ಲಿ ಹೇಳಿದ್ದಾರೆ.
ನನ್ನ ಈ ನಿರ್ಧಾರವು ನನಗೆ ಅದ್ಭುತ ಮತ್ತು ಆಶ್ಚರ್ಯಕರ ಅನುಭವವನ್ನು ನೀಡಿತು. ಹೀಗಾಗಿ ನಾನು ಮಾಂಸಾಹಾರಿಯಾಗುವುದಕ್ಕಿಂತ ಸಸ್ಯಾಹಾರಿಯಾಗಿರುವುದು ಉತ್ತಮ ಎಂಬುದನ್ನು ಹೇಳುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. ಇದೀಗ ಕಿಂಗ್ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.