ಇನ್ನುಮುಂದೆ ಬಸ್ನಲ್ಲಿ ಪ್ರಯಾಣಿಸಲು ಕೈಯಲ್ಲಿ ಕಾಸು ಇರಬೇಕಾಗಿಲ್ಲ! – ಕೆಎಸ್ಆರ್ಟಿಸಿಗೂ ಬಂತು ಡಿಜಿಟಲ್ ಪೇಮೆಂಟ್!
ಬೆಂಗಳೂರು: ಇದು ಡಿಜಿಟಲ್ ಇಂಡಿಯಾ.. ಕೈಯಲ್ಲಿ ಮೊಬೈಲ್ ಒಂದಿದ್ರೆ ಸಾಕು ಏನು ಬೇಕಾದರೂ ಖರೀದಿಸಬಹುದು. ಆದ್ರೆ ಬಸ್ಗಳಲ್ಲಿ ಪ್ರಯಾಣ ಮಾಡುವ ವೇಳೆ ಕೈಯಲ್ಲಿ ಒಂದಿಷ್ಟು ಕಾಸು ಬೇಕೇ ಬೇಕು.. ಯಾಕಂದ್ರೆ ಬಸ್ಗಳಲ್ಲಿ ಗೂಗಲ್ ಪೇ, ಫೋನ್ ಪೇ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ಕೈಯಲ್ಲಿ ಮೊಬೈಲ್ ಜೊತೆ ಪರ್ಸ್ ಕೂಡ ಬೇಕೇ ಬೇಕಿತ್ತು. ಆದ್ರೆ ಇನ್ನು ಮುಂದೆ ಈ ಚಿಂತೆ ಇರಲ್ಲ. ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ದರವನ್ನು ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸಬಹುದು.
ಹೌದು.. ಸದ್ಯ ಬೆಂಗಳೂರಿನ ಬಿಎಂಟಿಸಿ ಕೆಲ ಬಸ್ಗಳಲ್ಲಿ ಮಾತ್ರ ಈ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಮುಂದುವರಿದ ಭಾಗವಾಗಿ ರಾಜ್ಯಾದ್ಯಂತ ಆನ್ಲೈನ್ ಪೇಮೆಂಟ್ ಅನ್ನು ವಿಸ್ತರಣೆ ಮಾಡಲು ಸಾರಿಗೆ ಸಂಸ್ಥೆಗಳು ಮುಂದಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿಯೂ ಇನ್ನುಮುಂದೆ ಯುಪಿಐ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಬಸ್ಗಳಲ್ಲಿ ಯುಪಿಐ ಬಳಕೆ ಹೇಗೆ?
ಬಸ್ನ ಕಂಡಕ್ಟರ್ಗಳು ಐಡಿ ಕಾರ್ಡ್ ಮಾದರಿಯಲ್ಲಿ ತಮ್ಮ ಕುತ್ತಿಗೆಗೆ ಯುಪಿಐ ಕ್ಯೂಆರ್ ಕೋಡ್ ಒಳಗೊಂಡಿರುವ ಟ್ಯಾಗ್ ಒಂದನ್ನು ಹಾಕಿಕೊಂಡಿರುತ್ತಾರೆ. ಟಿಕೆಟ್ ನೀಡುವ ಸಂದರ್ಭದಲ್ಲಿ ಕಂಡಕ್ಟರ್ಗೆ ಯಾವ ಊರಿಗೆ ಇಳಿಯಬೇಕು ಎಂದು ಹೇಳಿದರೆ ಟಿಕೆಟ್ ದರ (ಶುಲ್ಕ) ಇಂತಿಷ್ಟಾಗುತ್ತದೆ ಹೇಳುತ್ತಾರೆ. ಯುಪಿಐ ಪೇಮೆಂಟ್ ಮಾಡಲು ಇಚ್ಛೆ ಪಡುವ ಪ್ರಯಾಣಿಕರು ಆ ಟ್ಯಾಗ್ನಲ್ಲಿರುವ ಕೋಡ್ ಅನ್ನು ತಮ್ಮ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿ ಪೇಮೆಂಟ್ ಟಿಕೆಟ್ ಮೊತ್ತವನ್ನು ಮಾಡಬೇಕು. ಬಳಿಕ ಪೇಮೆಂಟ್ ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಂದೇಶವನ್ನು ನಿರ್ವಾಹಕರಿಗೆ ತೋರಿಸಿದರೆ ಆಯ್ತು. ಅವರು ಟ್ರಾನ್ಸೆಕ್ಷನ್ ಐಡಿ ಕೊನೆಯ ಸಂಖ್ಯೆ ಬರೆದುಕೊಂಡು ಅಥವಾ ಅವರ ಇಟಿಎಂ ನಲ್ಲಿ ಸಂದೇಶ ಸ್ವೀಕರಿಸಿ ಟಿಕೆಟ್ ನೀಡುತ್ತಾರೆ.
ಯಾವೆಲ್ಲಾ ಆಪ್ಗಳನ್ನು ಬಳಸಿ ಪೇಮೆಂಟ್ ಮಾಡಬಹುದು?
ರಾಜ್ಯ ಸಾರಿಗೆ ಸಂಸ್ಥೆ ಯಾವೆಲ್ಲಾ ಆಪ್ಗಳನ್ನು ಬಳಸಿ ಪ್ರಯಾಣಿಕರು ಟಿಕೆಟ್ ದರ ಪಾವತಿಸಬಹುದು ಎಂಬುವುದರ ಕುರಿತು ಹೇಳಿದೆ. ಪ್ರಯಾಣಿಕರು ಗೂಗಲ್ ಪೇ, ಫೋನ್ ಪೇ, ಭೀಮ್, ಯುಪಿಐ, ಪೇಟಿಎಂ ಇತರೆ ಎಲ್ಲಾ ಬ್ಯಾಂಕ್ಗಳ ಮೊಬೈಲ್ ಆಪ್ಗಳ ಮುಖಾಂತರ ಪಾವತಿ ಮಾಡಬಹುದಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಬಸ್ನಲ್ಲಿ ಯುಪಿಐ ಪೇಮೆಂಟ್ ಅನುಕೂಲ ಏನು?
ಬಸ್ನಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಚಿಲ್ಲರೇ ಸಮಸ್ಯೆ ತಪ್ಪಲಿದೆ. ನಗದು ಕೈಯಲ್ಲಿ ಇರದಿದ್ದರೂ ಕೂಡಾ ಬಸ್ನಲ್ಲಿ ಪ್ರಯಾಣ ಮಾಡಬಹುದು. ಪ್ರಯಾಣ ಮಾರ್ಗದ ಸ್ಟೇಜ್ ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ. ಬಸ್ಗಳಲ್ಲಿ ಆದಾಯ ಸೋರಿಕೆ ತಡೆಯಬಹುದು. ಕ್ಯಾಶ್ಲೆನ್ಸ್ (ನಗದು ಮುಕ್ತ) ವ್ಯವಹಾರ. ಆತ್ಯಾಧುನಿಕ ತಂತ್ರಜ್ಞಾನ/ ಡಿಜಿಟಲ್ ಪೇಮೆಂಟ್ ಅಳವಡಿಕೆ ಹೆಗ್ಗಳಿಕೆ.