ಕುಡಿದು ಸತ್ತರೂ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಅಂತಾರೆ – ಸಚಿವರ ಬೇಜವಾಬ್ದಾರಿ ಹೇಳಿಕೆಗೆ ರೈತರ ಆಕ್ರೋಶ
ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಯಾದರೂ ಉತ್ತಮ ಫಸಲು ಬರಲಿ ಅಂತಾ ಕಾಯುತ್ತಿದ್ದ ರೈತರಿಗೆ ನಿರಾಶೆ ಉಂಟಾಗಿದೆ. ಬೆಳೆದ ಬೆಳೆ ಸಂಪೂರ್ಣ ನಾಶವಾಗುತ್ತಿದ್ದು, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರೈತರ ಆತ್ಮಹತ್ಯೆ ವಿಚಾರವಾಗಿ ಬೇಜವಾಬ್ದಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ ಪ್ರವಾಸ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಅವರು, ಒಬ್ಬರು ಕುಡಿದು ಕುಡಿದು ಸತ್ತಿದ್ದರು, ಹೃದಯಾಘಾತದಿಂದ ಸತ್ತವರೂ ಇದ್ದಾರೆ. ಆತ್ಮಹತ್ಯೆ ಅಂತ ದೂರು ಕೊಟ್ಟರೇ ಪರಿಹಾರ ಸಿಗುತ್ತೆ ಎನ್ನೋ ದುರಾಸೆ ಸಂಬಂಧಿಕರದ್ದು. ರೈತರು ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಮಳೆಯಿಲ್ಲದೆ ಈರುಳ್ಳಿ ಬೆಳೆ ನಾಶ – ಮನನೊಂದು ರೈತ ಆತ್ಮಹತ್ಯೆ
2020ನೇ ವರ್ಷದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನೀವು ಎಫ್ಐಆರ್ ಪರಿಗಣನೆ ತೆಗೆದುಕೊಂಡರೆ ನಿಮ್ಮ ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸುಮ್ಮ ಸುಮ್ಮನೆ ಪತ್ರಿಕೆಯವರು ಯಾಕೆ ಬರಿಯುತ್ತಿದ್ದಾರೆ ಗೊತ್ತಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇರುತ್ತಾರೆ. ನೀವೂ ಪರಿಶೀಲನೆ ಮಾಡಿ ಬರೆಯಬೇಕು. ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಇನ್ನೂ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಹೀಗಾಗಿ ತಪ್ಪು ವರದಿ ಮಾಡುವುದರಿಂದ ಗಾಭರಿಯಾಗುತ್ತದೆ. ಪರಿಹಾರ ಸಿಗಬಹುದು ಎಂದು ಆ ರೀತಿ ವರದಿ ಮಾಡುತ್ತಾರೆ. ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2014 ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಜನರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೀವೆ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗುತ್ತಿರಲ್ಲಿ. ಇವಾಗ ಹೆಚ್ಚು ವರದಿ ಆಗುತ್ತಿವೆ ಎಂದು ಹೇಳಿದ್ದಾರೆ.
ಸಚಿವರ ಹೇಳಿಕೆಗೆ ರೈತರ ಆಕ್ರೋಶ
ಇನ್ನು ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಇವತ್ತೇ ಐವತ್ತು ಲಕ್ಷ ಹಣ ಕೊಡುತ್ತೇವೆ. ಸಚಿವರೇ ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ? ನಿಮ್ಮ ಪರಿಹಾರದ ಬದಲು ಆತ್ಮಹತ್ಯೆ ಕಡಿಮೆ ಮಾಡಲು ಕ್ರಮಕೈಗೊಳ್ಳಿ. ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಸಚಿವರನ್ನು ಘೇರಾವ ಹಾಕಲಾಗುವುದು. ಸರ್ಕಾರ ಕೂಡಲೇ ಹಾವೇರಿ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಇವರನ್ನು ಮುಕ್ತಗೊಳಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.