ಸ್ವಂತ ವಾಹನದಲ್ಲಿ ಪ್ರಯಾಣಿಸುವುದ್ದಕ್ಕಿಂತ ಮೆಟ್ರೋ ಓಡಾಟವೇ ಬೆಸ್ಟ್! – ಬೆಂಗಳೂರಿನ ಶೇ.95 ರಷ್ಟು ಜನತೆಗೆ ನಮ್ಮ ಮೆಟ್ರೋ ಅಚ್ಚುಮೆಚ್ಚು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾಗಿ ದಶಕಗಳೇ ಕಳೆದಿದೆ. ಸ್ವಂತ ವಾಹನದಲ್ಲಿ ಓಡಾಡುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುವದ್ದಕ್ಕಿಂತ ಮೆಟ್ರೋದಲ್ಲಿ ಹೋಗುವುದೇ ವಾಸಿ ಅಂತಾ ಬೆಂಗಳೂರಿನ ಜನತೆ ನಿತ್ಯ ಓಡಾಡಲು ಮೆಟ್ರೋ ರೈಲುಗಳನ್ನೇ ಅವಲಂಭಿಸಿದ್ದಾರೆ. ಇದೀಗ ಖಾಸಗಿ ಸಂಸ್ಥೆಗಳೆರಡು ಮೆಟ್ರೋ ಪ್ರಯಾಣಿಕರ ಕುರಿತು ಸಮೀಕ್ಷೆಯೊಂದನ್ನು ನಡೆಸಿದ್ದು, ನಗರದ ಶೇಕಡ 95ರಷ್ಟುಜನತೆ ಸ್ವಂತ (ಖಾಸಗಿ) ವಾಹನದಲ್ಲಿ ಸಂಚರಿಸುವುದಕ್ಕಿಂತ ಹೆಚ್ಚಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಒಲವು ತೋರುತ್ತಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! – ಸೆ. 6 ರಿಂದ ʼಮೆಟ್ರೋ ಮಿತ್ರʼ ಆಟೋ ಸೇವೆ ಆರಂಭ
ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್) ಹಾಗೂ ವಲ್ಡ್‌ರ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲೂಆರ್‌ಐ) ಇಂಡಿಯಾ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ. ನಗರದಾದ್ಯಂತ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ 3,855 ಜನರನ್ನು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 1172 ಪ್ರಯಾಣಿಕರು ಪ್ರತಿದಿನ ಕಾರು, 1046 ಜನ ದ್ವಿಚಕ್ರ ವಾಹನ ಬಳಸುತ್ತಾರೆ. ಶೇ.70ರಷ್ಟುಜನ ಮನೆಯಿಂದ ಕಚೇರಿಗೆ ಉತ್ತಮ ಸಾರ್ವಜನಿಕ ಸಾರಿಗೆ ಇದ್ದರೆ ಅದನ್ನು ಬಳಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.
ಇನ್ನು ಖಾಸಗಿ ದ್ವಿಚಕ್ರ, ಕಾರಿನಲ್ಲಿ ತೆರಳಿದಲ್ಲಿ ಸುಮಾರು 45 ನಿಮಿಷದಿಂದ 1 ಗಂಟೆ ಒಂದು ದಿಕ್ಕಿನ ಪ್ರಯಾಣ ಕ್ರಮಿಸಬಹುದು. ಅದೇ ಮೆಟ್ರೋದಲ್ಲಿ ತೆರಳಿದರೆ 45 ನಿಮಿಷದ ಒಳಗೆ ಅಂತರ ಕ್ರಮಿಸಬಹುದು ಎಂಬ ವಿಚಾರ ಸಮೀಕ್ಷೆಯಿಂದ ಗೊತ್ತಾಗಿದೆ.
ಡಬ್ಲ್ಯುಆರ್‌ಐ ಇಂಡಿಯಾದ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ. ವೈಟ್‌ಫೀಲ್ಡ್ ಅನ್ನು ನಗರದ ಇತರ ಭಾಗಗಳಿಗೆ ಮೆಟ್ರೋ ಸಂಪರ್ಕಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ನೇರಳೆ ಮಾರ್ಗದ ಮೆಟ್ರೋ ಹೊರವರ್ತುಲ ರಸ್ತೆಯಲ್ಲಿ ನೆಲೆಸಿರುವ ಟೆಕ್ ಪಾರ್ಕ್ಗಳಿಗೆ ಫೀಡರ್ ಬಸ್‌ಗಳ ಸಂಪರ್ಕವನ್ನು ಕಲ್ಪಿಸುವುದರಿಂದ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದರು.
ಮೊದಲ ಹಾಗೂ ಕೊನೆ ಮೈಲಿ ಸಂಪರ್ಕ ಸಮಸ್ಯೆ, ಒಂದೇ ಟಿಕೆಟ್‌ನಲ್ಲಿ ಬಿಎಂಟಿಸಿ ಸೇರಿ ವಿವಿಧ ಸಾರಿಗೆಯಲ್ಲಿ ಸಂಚರಿಸುವ ವ್ಯವಸ್ಥೆ, ಬರಬೇಕಿದೆ ಎಂದು ಜನತೆ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.