ಮುತ್ತಯ್ಯ ಮುರಳೀಧರನ್ ಬಯೋಪಿಕ್ ರೆಡಿ – ‘800’ ಸಿನಿಮಾ ಟ್ರೇಲರ್ ರಿಲೀಸ್ಗೆ ಸಚಿನ್ ತೆಂಡುಲ್ಕರ್ ಗೆಸ್ಟ್
ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಅವರ ಜೀವನದ ಕುರಿತು ಸಿನಿಮಾ ಸಿದ್ಧವಾಗಿದೆ. ಮುರುಳೀಧರನ್ ಜೀವಾನಾಧರಿತ ಚಿತ್ರಕ್ಕೆ ‘800’ ಎಂದು ಹೆಸರು ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಬಯೋಪಿಕ್ ಸಿನಿಮಾದ ಟ್ರೇಲರ್ ಸಪ್ಟೆಂಬರ್ 5 ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾಗಿಯಾಗಲಿದ್ದಾರೆ.
ಎಂ.ಎಸ್. ಶ್ರೀಪತಿ ಅವರು ‘800’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಟ ಮಧುರ್ ಮಿತ್ತಲ್ ಅವರು ಈ ಚಿತ್ರದಲ್ಲಿ ಮುತ್ತಯ್ಯ ಮುರಳೀಧರ್ ಪಾತ್ರವನ್ನು ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ಟ್ರೇಲರ್ ಲಾಂಚ್ ಆಗಲಿದೆ. ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೇ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಕ್ರಿಕೆಟರ್ಗಳ ಜೀವನದ ಕುರಿತು ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿದ ದಿಗ್ಗಜರ ಬದುಕು ಎಲ್ಲರಿಗೂ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಇಂಥ ಸಿನಿಮಾ ಮಾಡಲಾಗುತ್ತದೆ. ಆ ಪೈಕಿ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಒಂದು ಉತ್ತಮ ಉದಾಹರಣೆ. ಈಗ ಮುತ್ತಯ್ಯ ಮುರಳೀಧರನ್ ಅವರ ಬದುಕಿನ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘800’ ಸಿನಿಮಾ ಮೂಡಿಬಂದಿದ್ದು, ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು, ಅಂದರೆ 800 ವಿಕೆಟ್ಗಳನ್ನು ಪಡೆದ ಏಕೈಕ ಬೌಲರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಆ ಕಾರಣದಿಂದಲೇ ಈ ಸಿನಿಮಾಗೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಏಕದಿನ ಪಂದ್ಯಗಳಲ್ಲಿ ಮುತ್ತಯ್ಯ ಮುರಳೀಧರನ್ ಅವರು 530 ವಿಕೆಟ್ ಪಡೆದಿದ್ದಾರೆ. 1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಾಗ ಆ ಟೀಮ್ನಲ್ಲಿ ಮುತ್ತಯ್ಯ ಮುರಳೀಧರನ್ ಆಟವಾಡಿದ್ದರು. ಅವರ ಬೌಲಿಂಗ್ ಶೈಲಿಯ ಬಗ್ಗೆ ಹಲವು ಬಾರಿ ಪ್ರಶ್ನೆ ಎದುರಾಗಿತ್ತು. ಆ ಎಲ್ಲ ಅಂಶಗಳು ಈ ಸಿನಿಮಾದಲ್ಲಿ ಪ್ರಸ್ತಾಪ ಆಗುವ ಸಾಧ್ಯತೆ ಇದೆ. ಎಂ.ಎಸ್. ಶ್ರೀಪತಿ ಅವರು ‘800’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಗಿಬ್ರಾನ್ ಅವರು ಸಂಗೀತ ನೀಡಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟ ಮಧುರ್ ಮಿತ್ತಲ್ ಅವರು ‘800’ ಚಿತ್ರದಲ್ಲಿ ಮುತ್ತಯ್ಯ ಮುರಳೀಧರ್ ಪಾತ್ರವನ್ನು ಮಾಡಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್ ಅವರು ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಅಕ್ಟೋಬರ್ನಲ್ಲಿ ಬಿಡುಗಡೆ ಆಗಲಿದೆ. ಸಚಿನ್ ತೆಂಡೂಲ್ಕರ್ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.