ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ! – ಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ಉದ್ಯಮಿಯಿಂದ ಬಂಪರ್ ಕಾಣಿಕೆ!
ಗುರುವಾಯೂರು: ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಅನೇಕ ದೇಗುಲಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬುಧವಾರದ ಅಷ್ಟಮಿ ರೋಹಿಣಿ ದಿನದಂದು ಪ್ರಸಿದ್ಧ ಗುರುವಾಯೂರು ದೇವರಿಗೆ ಚಿನ್ನದ ಕಿರೀಟವನ್ನು ತೊಡಿಸಲಾಗುತ್ತದೆ. ಈ ವರ್ಷ ಕೇರಳದ ಚಿನ್ನದ ಉದ್ಯಮಿರೊಬ್ಬರು ಚಿನ್ನದ ಕಿರೀಟವೊಂದನ್ನು ಉಡುಗೊರೆ ನೀಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುವ ಕೇರಳದ ತ್ರಿಸ್ಸೂರು ಜಿಲ್ಲೆಯ ಕೈನೂರು ತರವಾಡು ಮೂಲದ ಕೆ.ವಿ. ರಾಜೇಶ್ ಆಚಾರ್ಯ ಅವರು ಈ ಉಡುಗೊರೆ ನೀಡುತ್ತಿದ್ದಾರೆ. ಸೆ. 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನೆಲೆ ಅದೇ ದಿನ ಚಿನ್ನದ ಕಿರೀಟವನ್ನು ಗುರುವಾಯೂರಪ್ಪನಿಗೆ ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆಗೆ ಹೊಸ ರೂಲ್ಸ್ – ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ಉದ್ಯಮಿ ಕೆ.ವಿ. ರಾಜೇಶ್ ಆಚಾರ್ಯ ಅವರು ನೀಡಿರುವ ಚಿನ್ನದ ಕಿರೀಟ 38 ಸವರನ್ ತೂಕವಿದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ ಮತ್ತು ನಂತರ ದೇವಸ್ವಂನ ರಿಜಿಸ್ಟರ್ನಲ್ಲಿ ದಾಖಲಿಸಲಾಗುತ್ತದೆ. ಬಳಿಕ ಸುರಕ್ಷಿತ ಲಾಕರ್ಗೆ ವರ್ಗಾಯಿಸಲಾಗುತ್ತದೆ.
ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಅಲ್ಲದೆ, ಚಥಯಂ ದಿನದಂದು ಗುರುವಾಯೂರಪ್ಪನವರಿಗೆ ಸುಮಾರು ನೂರು ಸವರನ್ ತೂಕದ ಚಿನ್ನದ ಕಿಂಡಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಯಿತು. ಇದನ್ನು ಟಿವಿಎಸ್ ಗ್ರೂಪ್ ಕಾಣಿಕೆಯಾಗಿ ನೀಡಿದೆ. ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್ನಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.