ಸೂರ್ಯ ಶಿಕಾರಿಗೆ ಹೊರಟ ಇಸ್ರೋ – ಆದಿತ್ಯ L1 ನೌಕೆ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ PSLV C-57 ರಾಕೆಟ್

ಸೂರ್ಯ ಶಿಕಾರಿಗೆ ಹೊರಟ ಇಸ್ರೋ – ಆದಿತ್ಯ L1 ನೌಕೆ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ PSLV C-57 ರಾಕೆಟ್

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಮ್ಮ ಮತ್ತೊಂದು ಮಹತ್ವದ ಯೋಜನೆ ಆದಿತ್ಯ L1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶನಿವಾರ 11. 50 ಕ್ಕೆ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಮೂಲಕ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತ ಇಂದು ಸಾಕ್ಷಿಯಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.

ಇದನ್ನೂ ಓದಿ: ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ! – ಅ. 14ರಂದು ಸಂಭವಿಸಲಿದೆ ಸೂರ್ಯಗ್ರಹಣ

ಆದಿತ್ಯ ಎಲ್​1 ಅನ್ನು ಹಲವಾರು ಹಂತಗಳಲ್ಲಿ ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ ಸ್ಥಾಪಿಸಲಾಗುತ್ತದೆ. ಆದಿತ್ಯ L1  ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ ಉಡಾವಣೆಯ ಮಹತ್ವದ ಕ್ಷಣದಲ್ಲಿಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇಸ್ರೋದ ವಿಜ್ಞಾನಿಗಳು ಜತೆಯಾದರು. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು ಮಂದಿ ಸಾಕ್ಷಿಯಾದರೆ, ಆನ್​​ಲೈನ್ ನೇರ ಪ್ರಸಾರದ ಮೂಲಕ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

ಆದಿತ್ಯ L1 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ನೌಕೆ ಉಡಾವಣೆಗೂ ಮುನ್ನ ದೇಶದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾರ್ಥನೆ, ಪೂಜೆ ಇತ್ಯಾದಿಗಳ ಮೂಲಕ ಇಸ್ರೋಗೆ ಶುಭ ಹಾರೈಸಿದ್ದರು.

ಆದಿತ್ಯ L1 ಎಕ್ಸ್‌ಎಲ್ ಆವೃತ್ತಿಯ ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಗಮ್ಯಸ್ಥಾನಕ್ಕೆ ಪಯಣಿಸುತ್ತಿದ್ದು, ಸೂರ್ಯ ಕುರಿತ ಅಧ್ಯಯನಕ್ಕೆ ಇಸ್ರೋ ವಿಜ್ಞಾನಿಗಳಿಗೆ ನೆರವಾಗಲಿದೆ. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ (ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ) ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.

suddiyaana