ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಒಕ್ಕೂಟ – ಸೆ. 11 ರಂದು ಬೆಂಗಳೂರು ಬಂದ್‌

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಒಕ್ಕೂಟ – ಸೆ. 11 ರಂದು ಬೆಂಗಳೂರು ಬಂದ್‌

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ಜನರು ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣಿಸುತ್ತಾರೆ. ಖಾಸಗಿ ವಾಹನದಲ್ಲಿ ಓಡಾಡ ಕಡಿಮೆ ಮಾಡಿದ್ದಾರೆ, ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಖಾಸಗಿ ವಾಹನ ಮಾಲೀಕರು ದೂರುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡುವಂತೆ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿತ್ತು. ಆದರೂ ಕೂಡಾ ಸಮಸ್ಯೆಗೆ ಸರ್ಕಾರ ಯಾವುದೇ ಸ್ಪಂದನೆ ನೀಡದೇ ಹೋಗಿರುವ ಹಿನ್ನೆಲೆ ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್‌ಗೆ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ.

ಇದನ್ನೂ ಓದಿ: ರಾಜ್ಯದ ಸಚಿವರಿಗೆ ಕಾರು ಭಾಗ್ಯ – ಈ ಸಚಿವರಿಗೆ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌

ಈ ಬಗ್ಗೆ 32 ಸಂಘಟನೆಗಳಿರುವ ರಾಜ್ಯದ ಖಾಸಗಿ ಸಾರಿಗೆ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಬಂದ್ ನಡೆಸುವುದಾಗಿ ತಿಳಿಸಿದೆ. ಸೆಪ್ಟೆಂಬರ್ 11 ಸೋಮವಾರ ಆಟೋ, ಟ್ಯಾಕ್ಸಿ, ಏರ್ ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಾರ್ಪೋರೇಟ್ ವಾಹನಗಳು, ಸ್ಕೂಲ್ ಬಸ್ ಚಾಲಕರು, ಫ್ಯಾಕ್ಟರಿ ವಾಹನ, ಸ್ಟೇಜ್ ಗ್ಯಾರೇಜ್ ಬಸ್‌ಗಳು ಇರುವುದಿಲ್ಲ. ಭಾನುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರು ಬಂದ್ ಇರಲಿದೆ ಎಂದು ತಿಳಿಸಿದೆ.

ಖಾಸಗಿ ಸಾರಿಗೆ ಬೇಡಿಕೆಗಳೇನು?

ಖಾಸಗಿ ಸಾರಿಗೆಗಳ ಉದ್ಯಮಕ್ಕೆ ಹೊಡೆತ ಬಿದ್ದಿರುವುದರಿಂದ ರಾಜ್ಯದ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರದ ಮುಂದೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದೆ. ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು. ಬೈಕ್, ರ್ಯಾಪಿಡ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ ಮಾಡಬೇಕು.  ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು. ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುವುದಕ್ಕೆ ಬ್ರೇಕ್ ಹಾಕಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಓಲಾ, ಊಬರ್ ಆ್ಯಪ್ ಆಧಾರಿತ ಸೇವೆಗಳ ನಿರ್ಬಂಧ ಹೇರಬೇಕು. ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ ನೀಡಬೇಕು. ಖಾಸಗಿ ವಾಹನಗಳನ್ನು ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯಬೇಕು. ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮುಂದೆ ಬೇಡಿಕೆಗಳನ್ನು ಇಟ್ಟಿದೆ.

suddiyaana