ರಾಜ್ಯದ ಸಚಿವರಿಗೆ ಕಾರು ಭಾಗ್ಯ – ಈ ಸಚಿವರಿಗೆ ಇನ್ನೋವಾ ಹೈಕ್ರಾಸ್ ಹೈಬ್ರಿಡ್
ಬೆಂಗಳೂರು: ರಾಜ್ಯ ಸರ್ಕಾರ ಶತದಿನೋತ್ಸವ ಪೂರೈಸಿದ್ದು, ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾಂರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಗೃಹಲಕ್ಷ್ಮೀ ಯೋಜನೆಗೆ ಅದ್ದೂರಿ ಚಾಲನೆ ನೀಡಲಾಗಿತ್ತು. ಸದ್ಯದಲ್ಲೇ ಯುವನಿಧಿ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿತ್ತು. ಈ ಬೆನ್ನಲ್ಲೇ ರಾಜ್ಯದ ಸಚಿವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರ ಎಲ್ಲಾ ಸಚಿವರಿಗೆ ಹೊಸ ಕಾರಿನ ಭಾಗ್ಯ ನೀಡಿದೆ.
ಇದನ್ನೂ ಓದಿ: ಕೈಕೊಟ್ಟ ಮುಂಗಾರು ಮಳೆ – ಸೆಪ್ಟೆಂಬರ್ 4ರಂದು ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಘೋಷಣೆ
ರಾಜ್ಯ 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್ ಎಂಪಿವಿ ಕಾರು ಖರೀದಿಗೆ ಸರ್ಕಾರದ ಹಣ ಬಿಡುಗಡೆ ಮಾಡಿದೆ. ಒಂದು ಕಾರಿಗೆ 30 ಲಕ್ಷ ರೂ.(ಜಿಎಸ್ಟಿ ಒಳಗೊಂಡಂತೆ ಎಕ್ಸ್ ಶೋ ರೂಮ್ ಬೆಲೆ) ನಂತೆ 33 ಕಾರು ಖರೀದಿಗೆ ಒಟ್ಟು 9.90 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಸರ್ಕಾರ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ ಕಂಪನಿಯಿಂದ ನೇರವಾಗಿ ಕಾರು ಖರೀದಿಸಲಿದೆ ಎಂದು ಮೂಲಗಳು ತಿಳಿಸಿವೆ.
2022ರ ಡಿಸೆಂಬರ್ನಲ್ಲಿ ಈ ಕಾರು ದೇಶದ ಮಾರುಕಟ್ಟೆಗೆ 8 ವಿವಿಧ ಮಾದರಿಯಲ್ಲಿ ಬಿಡುಗಡೆಯಾಗಿದೆ. 18.30 ಲಕ್ಷ ರೂ.ನಿಂದ ಆರಂಭಗೊಂಡು ಟಾಪ್ ಮಾಡೆಲ್ ಕಾರಿಗೆ 30.26 ಲಕ್ಷ ದರ ಇದೆ. ಇದು ಎಕ್ಸ್ ಶೋ ರೂಮ್ ಬೆಲೆಯಾಗಿದ್ದು ಜೆಎಸ್ಟಿ, ರಸ್ತೆ ತೆರಿಗೆ ಸೇರಿದಾಗ ಜಾಸ್ತಿಯಾಗುತ್ತದೆ. ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು 4,755 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವನ್ನು ಹೊಂದಿದೆ.