ಸಿಲಿಕಾನ್‌ ಸಿಟಿಯಲ್ಲಿ ಮಳೆರಾಯನ ಅಬ್ಬರ, ಹಲವು ಏರಿಯಾ ಜಲಾವೃತ – ಸೆ.7ರವರೆಗೆ ಮಳೆ ಮುನ್ಸೂಚನೆ

ಸಿಲಿಕಾನ್‌ ಸಿಟಿಯಲ್ಲಿ ಮಳೆರಾಯನ ಅಬ್ಬರ, ಹಲವು ಏರಿಯಾ ಜಲಾವೃತ – ಸೆ.7ರವರೆಗೆ ಮಳೆ ಮುನ್ಸೂಚನೆ

ಬೆಂಗಳೂರು: ಬರಗಾಲದ ಭೀತಿ ಹುಟ್ಟಿಸಿದ್ದ ಮಳೆರಾಯ ಸೆಪ್ಟೆಂಬರ್‌ ಆರಂಭದಲ್ಲೇ ರಾಜ್ಯದಲ್ಲಿ ತಂಪೆರೆಯುವ ಭರವಸೆ ಮೂಡಿಸಿದ್ದಾನೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಬರಲಿದೆ ಮಳೆ?

ರಾಜ್ಯದಲ್ಲಿ ಹವಾಮಾನ ಇಲಾಖೆ ಮುಂದಿನ ಆರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 2 ರಿಂದ 7 ರವೆರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಬೆಂಗಳೂರು, ಮೈಸೂರು ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗುವ ಸಾಧ್ಯತೆಗಳಿವೆ. ಅಲ್ಲದೇ ಕರ್ನಾಟಕದ ಉತ್ತರ ಭಾಗಗಳಲ್ಲೂ ಭರದ ಛಾಯೆ ಆವರಿಸಿದ್ದು, ಉತ್ತಮ ಮಳೆಯಾದರೆ ರೈತರಿಗೆ ಸ್ವಲ್ಪ ನೆಮ್ಮದಿ ಸಿಗುವ ನಿರೀಕ್ಷೆ ಇದೆ. ಹಾಗಿದ್ದರೂ ಕೊಡಗು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ನಾಡಿನ ಜೀವನದಿಗಳು ತುಂಬಿ ಹರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತದಲ್ಲಿ 2 ದಿನ ಜಿ20 ಶೃಂಗಸಭೆ – ಯುವಕರಿಗೆ ಕೋತಿಯಂತೆ ವರ್ತಿಸಲು ಟ್ರೈನಿಂಗ್‌.. ರಸ್ತೆಗಳಲ್ಲಿ ಮುಸಿಯಾಗಳ ಕಟೌಟ್!

ಬೆಂಗಳೂರಿನಲ್ಲಿ ರಾತ್ರಿ ಮಳೆಯ ಅಬ್ಬರ

ಸಿಲಿಕಾನ್‌ ಸಿಟಿ  ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಸಿದ್ದಾನೆ. ವರುಣನ ಅಬ್ಬರಕ್ಕೆ ನಗರದ ಹಲವು ಏರಿಯಾ ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.

ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ದಿಢೀರ್‌ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡವು. ಹೆಬ್ಬಾಳದಲ್ಲಿ ತಗ್ಗು ಪ್ರದೇಶದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಲ್ಲೇಶ್ವರಂ 6ನೇ ಕ್ರಾಸ್‌ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಮಳೆ ಮತ್ತು ಚರಂಡಿ ನೀರು ನುಗ್ಗಿತು. ನಿನ್ನೆ ರಾತ್ರಿ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಲಾಗಿತ್ತು. ಎಲ್ಲ ಭಕ್ತರು ದೇವಾಲಯದೊಳಗೆ ಸಿಲುಕಿಕೊಂಡ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲದೆ, ದೇವಸ್ಥಾನಕ್ಕೆ ನುಗ್ಗಿದ ನೀರನ್ನು ಭಕ್ತಾದಿಗಳು ಆಚೆ ಹಾಕಿದರು.

suddiyaana