ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

ಕಾಡಿನ ರಕ್ಷಣೆಯೇ ಬದುಕಾಗಿತ್ತು. ಅರಣ್ಯವೇ ಹೊಸ ಜೀವನ ನೀಡಿತ್ತು. ಕಾಡು ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಆದರೆ, ಅರಣ್ಯದಲ್ಲಿಯೇ ತನಗಾಗಿ ಸಾವು ಹೊಂಚು ಹಾಕಿ ಕೂತಿತ್ತು ಅನ್ನೋ ಪರಿವೆಯೂ ಇರಲಿಲ್ಲ. ಅದು ಕೂಡಾ ಕರ್ತವ್ಯ ಮಾಡಲು ಹೋಗಿ ಜೀವಕ್ಕೆ ಕಂಟಕವಾಗಿದ್ದು ನಿಜಕ್ಕೂ ದುರಂತವೇ. ಇನ್ನೂ ವಿಪರ್ಯಾಸವೆಂದರೆ, ಇವರು ಹೋಗಿದ್ದು ಗಾಯಗೊಂಡಿದ್ದ ಆನೆಯನ್ನು ರಕ್ಷಣೆ ಮಾಡಲು. ಆದರೆ, ಆ ಮೂಕ ಪ್ರಾಣಿಗೇನು ಗೊತ್ತು. ತನ್ನತ್ತ ಬರುತ್ತಿರುವ ಅರಣ್ಯ ಸಿಬ್ಬಂದಿ ತನ್ನ ರಕ್ಷಣೆಗಾಗಿ ಬರುತ್ತಿದ್ದಾರೆ ಎಂದು. ಕೊನೆಗೆ ಅಲ್ಲಾಗಿದ್ದು ಘೋರ ದುರಂತ.

ಇದನ್ನೂ ಓದಿ: ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು

ಹಾಸನದ ಹಳ್ಳಿಯೂರಿನಲ್ಲಿ ಕಾಡಾನೆ ಭೀಮ ತೀವ್ರವಾಗಿ ಗಾಯಗೊಂಡಿದ್ದ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗೆ ಚಿಕಿತ್ಸೆ ಕೊಡಲು ಮುಂದಾಗಿದ್ದರು. ಆ. 31ರಂದು ಬೆಳಗ್ಗೆ ಚಿಕಿತ್ಸೆ ನೀಡಲೆಂದು ಅರಣ್ಯ ಇಲಾಖೆಯ ಸಿಬ್ಬಂದಿಯು ಬಂದಾಗ ಭೀಮ ಸಿಟ್ಟಿಗೆದ್ದಿದ್ದಾನೆ. ಅರಣ್ಯ ಸಿಬ್ಬಂದಿ ವೆಂಕಟೇಶ್ ಮೇಲೆ  ಮೇಲೆ ದಾಳಿ ನಡೆಸಿದ್ದಾನೆ. ಓಡುವಾಗ ವೆಂಕಟೇಶ್ ಅವರು ಮುಗ್ಗರಿಸಿ ಬಿದ್ದು ಆನೆ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ವೆಂಕಟೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಕಾಡಾನೆ ಭೀಮ ಗಾಯಗೊಂಡಾಗಿನಿಂದ ಆನೆಯನ್ನು ಹುಡುಕಾಡಿ ಅದರ ಗಾಯಕ್ಕೆ ಚಿಕಿತ್ಸೆ ನೀಡುವ ಕೆಲಸ ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿಯು ಮಾಡುತ್ತಿದ್ದರು. ದೂರದಿಂದಲೇ ಅದಕ್ಕೆ ಅರವಳಿಕೆ ಗನ್ ನಿಂದ ಅರವಳಿಕೆ ಕೊಟ್ಟು, ಅದು ಪ್ರಜ್ಞೆ ತಪ್ಪಿದ ನಂತರ ಅದರ ಬಳಿಗೆ ಹೋಗಿ ಅದಕ್ಕೆ ಚಿಕಿತ್ಸೆ ನೀಡುವುದು ನಿತ್ಯದ ಕೆಲಸವಾಗಿತ್ತು. ಅದೇ ರೀತಿ, ಆ. 31ರಂದು ಬೆಳಗ್ಗೆಯಿಂದ ಆನೆಯನ್ನು ಹುಡುಕಾಡುತ್ತಿದ್ದ ಸಿಬ್ಬಂದಿಗೆ, ಅದು ಆಲೂರು ತಾಲೂಕಿನ ಹಳ್ಳಿಯೂರು ಎಂಬಲ್ಲಿ ನಿಂತಿದ್ದು ಕಣ್ಣಿಗೆ ಬಿತ್ತು. ಅದನ್ನು ಗಮನಿಸಿದ ವೈದ್ಯರು, ದೂರದಿಂದಲೇ ಅದಕ್ಕೆ ಅರವಳಿಕೆ ನೀಡಿದ್ದಾರೆ. ಆದರೆ, ಅರವಳಿಕೆ ಗನ್ ಶಬ್ದ ಕೇಳುತ್ತಲೇ ರೊಚ್ಚಿಗೆದ್ದ ಭೀಮ, ಕೂಡಲೇ ಅರಣ್ಯ ಸಿಬ್ಬಂದಿಯಿದ್ದ ಕಡೆಗೆ ಧಾವಿಸಿಬಂದಿದ್ದಾನೆ. ಈ ಸಂದರ್ಭದಲ್ಲಿ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಯು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಭೀಮನು ವೆಂಕಟೇಶ್ ಅವರನ್ನೇ ಬೆನ್ನಟ್ಟಿ ಹೋಗಿದ್ದಾನೆ. ಸ್ವಲ್ಪ ದೂರ ಓಡಿದ ಮೇಲೆ ವೆಂಕಟೇಶ್ ಮುಗ್ಗರಿಸಿ ಬಿದ್ದಿದ್ದು, ಆನೆಯು ಆತನ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ತನ್ನ ಸೊಂಡಿಲಿನಿಂದ ವೆಂಕಟೇಶ್ ಅವರನ್ನು ಮನಸೋ ಇಚ್ಛೆ ಬಡಿದು, ಕಾಲಿನಿಂದ ತಿವಿದ ಭೀಮ ಅಲ್ಲಿಂದ ಹೊರಟು ಹೋಗಿದ್ದಾನೆ.

ಮೂರು ದಿನಗಳ ಹಿಂದೆ, ಇತರ ಕಾಡಾನೆಗಳ ಜೊತೆಗೆ ಕಾದಾಟ ನಡೆಸಿದ್ದ ಭೀಮ, ಬೇರೆ ಕಾಡಾನೆಯೊಂದರ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಆತನಿಗೆ ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಕಳೆದ ಮೂರು ದಿನಗಳಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರವಾದ ಗಾಯ, ನೋವು, ಹಸಿವಿನಿಂದ ಭೀಮ ಕಂಗೆಟ್ಟಿದ್ದ ಎಂದು ಹೇಳಲಾಗಿದೆ. ಅಹಾರವೇನೂ ತಿನ್ನದೆ ನರಳಾಡುತ್ತಿದ್ದ ಭೀಮನ ಸಿಟ್ಟು ಅರಣ್ಯಸಿಬ್ಬಂದಿಯನ್ನು ಬಲಿಪಡೆದಿದೆ.

suddiyaana