ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ. 9,10ರಂದು ಜಿ20 ಶೃಂಗಸಭೆ – ಜೋ ಬೈಡೆನ್ ಭದ್ರತಾ ಪಡೆಗೆ 400 ರೂಮ್ ಬುಕ್!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ ಸೆಪ್ಟೆಂಬರ್ 9-10ರಂದು ಜಿ20 ಶೃಂಗಸಭೆ ನಡೆಯಲಿದೆ. ಶೃಂಗಸಭೆಯಲ್ಲಿ ಹಲವು ವಿದೇಶಿ ಗಣ್ಯರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಆಗಮಿಸುತ್ತಿದ್ದಾರೆ. ಬೈಡೆನ್ ಮತ್ತು ಅವರ ಅವರ ಭದ್ರತಾ ಪಡೆಗೆ ಹೊಟೇಲ್ನಲ್ಲಿ ಬರೋಬ್ಬರಿ 400 ರೂಮ್ ಬುಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, 14 ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಅತಿಥಿ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ ಅಧಿಕಾರಿಗಳು ಐಟಿಸಿ ಮೌರ್ಯ, ತಾಜ್ ಪ್ಯಾಲೆಸ್, ದಿ ಒಬೆರಾಯ್, ದಿ ಲೋಧಿ, ದಿ ಇಂಪೀರಿಯಲ್ ಮತ್ತು ಲೆ ಮೆರಿಡಿಯನ್ ಸೇರಿದಂತೆ ನವದೆಹಲಿಯ ಪ್ರಮುಖ ಹೊಟೇಲ್ಗಳಲ್ಲಿ ರೂಮ್ಗಳನ್ನು ಕಾಯ್ದಿರಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಅವರ ಭದ್ರತಾ ಪಡೆಗೆ ದೆಹಲಿಯ ಐಟಿಸಿ ಮೌರ್ಯ ಶರ್ಟನ್ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿನ 14ನೇ ಮಹಡಿಯಲ್ಲಿ ಬೈಡೆನ್ ಹಾಗೂ ಉಳಿದ 400 ಕೊಠಡಿಗಳಲ್ಲಿ ಅವರ ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
ಈ ಹಿಂದೆ ಈ ಹೋಟೆಲ್ನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರಿಗೆ ಆತಿಥ್ಯ ನೀಡಲಾಗಿತ್ತು. ಜಿ20 ಸಭೆ ಹಿನ್ನೆಲೆ ಭಾರತಕ್ಕೆ ಆಗಮಿಸುತ್ತಿರುವ ಜೋ ಬೈಡೆನ್ ಅವರ ಸುರಕ್ಷತೆಗಾಗಿ ಅಮೆರಿಕ ರಹಸ್ಯ ಸೇವೆಯು ಹೊಟೇಲ್ ಆವರಣವನ್ನು ಪರಿಶೀಲಿಸುತ್ತಿದೆ.
ಇನ್ನು ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರು ದೆಹಲಿಯ ತಾಜ್ ಹೋಟೆಲ್ನಲ್ಲಿ ಉಳಿಯುವ ಸಾಧ್ಯತೆಯಿದೆ. ಇನ್ನು ಜರ್ಮನಿ ಅಧಿಕಾರಿಗಳೊಂದಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಅವರಿಗೆ ಹೊಟೇಲ್ ಶಾಂಗ್ರಿ-ಲಾದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ತಮ್ಮ ಸಿಬ್ಬಂದಿಯೊಂದಿಗೆ ದಿ ಕ್ಲಾರಿಡ್ಜಸ್ ಹೊಟೇಲ್ನಲ್ಲಿ ತಂಗಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ದೆಹಲಿಯ ಇಂಪೀರಿಯಲ್ ಹೊಟೇಲ್ನಲ್ಲಿ ತಂಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಸೆಪ್ಟೆಂಬರ್ 8ರಿಂದ 10ನೇ ತಾರೀಕಿನವರೆಗೂ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಿರಲಿವೆ. ಅಲ್ಲದೇ ನವದೆಹಲಿ ಜಿಲ್ಲೆಯ ಮಾರುಕಟ್ಟೆಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಮತ್ತು ಬ್ಯಾಂಕುಗಳು ಈ ಮೂರು ದಿನಗಳು ಮುಚ್ಚಲಿದೆ. ಜಿ20 ಶೃಂಗಸಭೆ ಹಿನ್ನೆಲೆ ದೆಹಲಿ ಪೊಲೀಸರು ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಈಗ ಕೊನೆಯ ಹಂತ ತಲುಪಿದೆ. ಜಿ20 ಶೃಂಗಸಭೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.