ಹಿಜಾಬ್ ಬಳಿಕ ಈಗ ಅಬಯಾ ಕೂಡ ನಿಷೇಧ! – ಶಾಲೆಗಳಲ್ಲಿ ಹೊಸ ನಿಯಮ ಜಾರಿಗೊಳಿಸಿದ ಫ್ರಾನ್ಸ್!
ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಅಬಯಾ ಉಡುಗೆಯನ್ನು ನಿಷೇಧಿಸಲು ಫ್ರಾನ್ಸ್ ಮುಂದಾಗಿದೆ. ಧಾರ್ಮಿಕ ಚಿಹ್ನೆಗಳನ್ನು ಹೊಂದಿದ ಬಟ್ಟೆಗಳನ್ನು ಶಾಲೆಗಳಿಗೆ ಧರಿಸಿಕೊಂಡು ಬರುವಂತಿಲ್ಲ ಎಂದು ಅಲ್ಲಿನ ಫ್ರಾನ್ಸ್ ಸರ್ಕಾರ ಆದೇಶಿಸಿದೆ.
ಮುಸ್ಲಿಂ ಮಹಿಳೆಯರು ಧರಿಸುವ ಅಬಯಾ ಉಡುಪನ್ನು ಶಾಲೆಗಳಲ್ಲಿ ಧರಿಸುವುದನ್ನು ನಿಷೇಧಿಸಲಾಗಿದೆ. ಅಬಯಾ ಉಡುಪು ಫ್ರಾನ್ಸ್ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನನ್ನು ಉಲ್ಲಂಘಿಸಿದೆ. ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು ಅವಕಾಶವಿರುವುದಿಲ್ಲ. ಸೆಪ್ಟೆಂಬರ್ 4 ರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ತರಲಾಗುವುದು ಎಂದು ಫ್ರಾನ್ಸ್ನ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುವುದನ್ನು ದೀರ್ಘಕಾಲದಿಂದ ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಅಬಯಾಗಳನ್ನು ಧರಿಸುವ ಕುರಿತು ಹಲವು ತಿಂಗಳಿನಿಂದ ಚರ್ಚೆ ನಡೆದಿದೆ. ಬಲಪಂಥೀಯರು ಅಬಯಾ ನಿಷೇಧಕ್ಕೆ ಒತ್ತಾಯಿಸಿದರೆ, ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿದ್ದಾರೆ.
ಈ ವಿಚಾರವಾಗಿ ಶಿಕ್ಷಕರು ಮತ್ತು ಪೋಷಕರ ನಡುವೆ ಶಾಲೆಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ ಅವರ ಉಡುಪುಗಳಿಂದಾಗಿ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು. ಈ ಹಿನ್ನೆಲೆ 2004ರ ಮಾರ್ಚ್ನಲ್ಲಿ ಕಾನೂನು ಶಾಲೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಸಂಬಂಧಿತ ಚಿಹ್ನೆಗಳನ್ನು ತೋರ್ಪಡಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿತು.