ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಚ್ಯುತಿ ತರಬಾರದು – ʼದಿ ಕಾಶ್ಮೀರ್ ಫೈಲ್ಸ್’ ಆಯ್ಕೆಗೆ ಸ್ಟಾಲಿನ್ ಕಿಡಿ!
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ. ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿಗೆ ‘ದಿ ಕಾಶ್ಮೀರ್ ಫೈಲ್ಸ್’ಚಿತ್ರ ಆಯ್ಕೆಯಾಗಿದೆ. ಈ ಚಿತ್ರ ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಧಕ್ಕೆ ತರಬಾರದು ಅಂತಾ ಹೇಳಿದ್ದಾರೆ.
ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಪ್ರಶಸ್ತಿ ಗೆದ್ದಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತ ಚಿತ್ರ ವಿಮರ್ಶಕರು ವಿವಾದಾತ್ಮಕ ಎಂದು ಬಹಿಷ್ಕರಿಸಿದ ಚಿತ್ರಕ್ಕೆ ಅತ್ಯುತ್ತಮ ಭಾವೈಕ್ಯತೆಗಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಘೋಷಿಸಿರುವುದು ಆಘಾತಕಾರಿಯಾಗಿದೆ ಎಂದು ದಿ ಕಾಶ್ಮೀರ ಫೈಲ್ ಚಿತ್ರದ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಕೃತಿಗಳು ಮತ್ತು ಚಲನಚಿತ್ರಗಳಿಗೆ ನೀಡುವ ಪ್ರಶಸ್ತಿಗಳು ರಾಜಕೀಯದಿಂದ ಮುಕ್ತವಾಗಿರಬೇಕು. ಇದರಿಂದ ಮಾತ್ರ ಅವುಗಳ ಸ್ಥಾನಮಾನ ಹೆಚ್ಚಲಿದೆ. ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಚ್ಯುತಿ ತರಬಾರದು ಎಂದು ಸಿಎಂ ಹೇಳಿದ್ದಾರೆ.
ಇನ್ನೊಂದೆಡೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಆಯಾ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಗಾಯಕಿ ಶ್ರೇಯಾ ಘೋಸಲ್, ಸಂಗೀತಗಾರ ಶ್ರೀಕಾಂತ್ ದೇವ ಮತ್ತು ಕಡೈಸಿ ವಿವಸಾಯಿ ಮತ್ತು ಸಿರ್ಪಿಗಳಿನ್ ಸಿರ್ಪಂಗಳ ತಂಡವನ್ನು ಅವರು ಶ್ಲಾಘಿಸಿದ್ದಾರೆ.