ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದಿದ್ದ ತಂದೆ-ಮಗ ಜಲಾಹುತಿ

ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ಶುಕ್ರವಾರ ಮನೆಯಲ್ಲಿ ಲಕ್ಷ್ಮೀಯನ್ನ ಕೂರಿಸಿ ಪೂಜೆ ಮಾಡೋಕೆ ಭರ್ಜರಿ ಸಿದ್ಧತೆ ಕೂಡ ನಡೆಯುತ್ತಿದೆ. ಆದರೆ ಹಬ್ಬಕ್ಕೂ ಮುನ್ನವೇ ಈ ಮನೆಯಲ್ಲಿ ಸೂತಕ ಆವರಿಸಿದೆ. ತಾವರೆ ಹೂ ಕೀಳಲೆಂದು ಕೆರೆಗೆ ಇಳಿದ ತಂದೆ ಮಗ ಬಾರದ ಲೋಕ ಸೇರಿದ್ದಾರೆ.
ಇದನ್ನೂ ಓದಿ : ಹಬ್ಬಕ್ಕೆ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರು – ಹೂವು, ಹಣ್ಣುಗಳ ಬೆಲೆ ಭಾರಿ ಏರಿಕೆ
ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು ಹೂ, ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿದೆ. ತಾವರೆ ಹೂ ಕೀಳಲೆಂದು ಕೆರೆಗೆ ಇಳಿದ ತಂದೆ ಮಗ ಇಬ್ಬರೂ ಮುಳುಗಿ ಸಾವಿಗೀಡಾದ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಪುಟ್ಟರಾಜು (42) ಹಾಗೂ ಮಗ ಕೇಶವ (14) ಮೃತಪಟ್ಟ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರ ಶಾಂತಿನಗರದ ನಿವಾಸಿಗಳೆಂದು ತಿಳಿದುಬಂದಿದೆ.
ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಮಾರಾಟ ಮಾಡಲು ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ತಂದೆ ಮಗ ಹೋಗಿದ್ದರು. ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದ ವೇಳೆ ಅವಘಡ ಸಂಭವಿಸಿದೆ. ಆಳ ತಿಳಿಯದೆ ಇದ್ದುದ್ದರಿಂದ ಕೆಸರಿನಲ್ಲಿ ಸುಲುಕಿ ಇಬ್ಬರೂ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವ ಬಗ್ಗೆ ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಕೆರೆಯಲ್ಲಿ ಮೃತದೇಹಗಳಿಗೆ ಶೋಧ ನಡೆಸಿ ದೇಹಗಳನ್ನು ಹೊರಗೆ ತೆಗೆದಿದ್ದಾರೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.