ಕೆಲವೇ ತಿಂಗಳಲ್ಲಿ ತನ್ನ ವರಸೆ ಬದಲಿಸಿದ ಪಾಕಿಸ್ತಾನದ ಮಾಜಿ ಸಚಿವ – ಚಂದ್ರಯಾನ-3 ಯೋಜನೆಯನ್ನು ಕೊಂಡಾಡಿದ ಫವಾದ್ ಚೌಧರಿ
ಚಂದ್ರಯಾನ -3 ನೌಕೆ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಲು ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿವೆ. ಈ ಮಧ್ಯೆಯೇ ಭಾರತದ ಚಂದ್ರಯಾನ- 2ರ ವೈಫಲ್ಯವನ್ನು ಸಂಭ್ರಮಿಸಿದ್ದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ, ಈಗ ಚಂದ್ರಯಾನ- 3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಪಾಕಿಸ್ತಾನದ ಮಾಧ್ಯಮಗಳು ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಚಂದ್ರಯಾನ- 3 ಯೋಜನೆಯನ್ನು ‘ಮನುಕುಲದ ಐತಿಹಾಸಿಕ ಗಳಿಗೆ’ ಎಂದು ಬಣ್ಣಿಸಿರುವ ಅವರು, ಭಾರತದ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯವನ್ನು ಕೊಂಡಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫವಾದ್ ಚೌಧರಿ, ಚಂದ್ರಯಾನದ ಚಂದ್ರನ ಲ್ಯಾಂಡಿಂಗ್ ಅನ್ನು ಪಾಕಿಸ್ತಾನ ಮಾಧ್ಯಮಗಳು ನೇರ ಪ್ರಸಾರ ಮಾಡಬೇಕು. ಮನುಕುಲದ, ಮುಖ್ಯವಾಗಿ ಭಾರತದ ಜನರು, ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯಕ್ಕೆ ಐತಿಹಾಸಿಕ ಗಳಿಕೆಯಾಗಿದೆ. ಅಭಿನಂದನೆಗಳು” ಎಂದು ಫವಾದ್ ಚೌಧರಿ ಬರೆದಿದ್ದಾರೆ.
ಇದನ್ನೂ ಓದಿ: ಚಂದ್ರಯಾನ 3 ಹಿಂದಿದೆ ಹಲವು ವಿಜ್ಞಾನಿಗಳ ತಪಸ್ಸು – ಬಾಹ್ಯಾಕಾಶದಲ್ಲಿ ಚರಿತ್ರೆ ಸೃಷ್ಟಿಸಿದ ಚತುರರು ಇವರು
ಕೆಲವು ತಿಂಗಳ ಹಿಂದಷ್ಟೇ ಅವರು ಚಂದ್ರಯಾನದ ಪ್ರಯತ್ನಗಳನ್ನು ಫವಾದ್ ಚೌಧರಿ ಟೀಕಿಸಿದ್ದರು. ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಫವಾದ್, “ಅಂತಹ ಪ್ರಯತ್ನಗಳನ್ನು ಮಾಡುವ ಅಗತ್ಯವೇ ಇಲ್ಲ” ಎಂದು ಹೇಳಿದ್ದರು. “ಚಂದ್ರ ಕಣ್ಣಿಗೇ ಕಾಣಿಸುತ್ತಾನೆ. ಅದು ಇರುವ ಸ್ಥಳ ಕೂಡ ಚೆನ್ನಾಗಿ ಗೊತ್ತಿದೆ. ಅದು ಎಷ್ಟು ಎತ್ತರದಲ್ಲಿ ಇದೆ, ಅದರ ಪ್ರದೇಶ ಹೇಗಿದೆ ಎನ್ನುವುದು ಕೂಡ ತಿಳಿದಿದೆ” ಎಂದು ಹೇಳಿದ್ದರು. ಆದರೆ ಅವರ ಹೇಳಿಕೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಪಾಕಿಸ್ತಾನದ ಜನರೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ತಮ್ಮ ಟೀಕೆಗೆ ಪ್ರತಿಯಾಗಿ ಎದುರಾಗಿದ್ದ ಟ್ರೋಲ್‌ಗಳ ವಿರುದ್ಧವೂ ಅವರು ಹರಿಹಾಯ್ದಿದ್ದರು. “ಭಾರತದ ಟ್ರೋಲ್ ಪ್ರತಿಕ್ರಿಯೆ ಕಂಡು ಅಚ್ಚರಿಯಾಗಿದೆ. ಅವರ ಚಂದ್ರಯಾನ ಯೋಜನೆಯನ್ನು ನಾನೇ ಹಾಳು ಮಾಡಿದವನಂತೆ ನನ್ನನ್ನು ನಿಂದಿಸುತ್ತಿದ್ದಾರೆ. ಗೊತ್ತಿಲ್ಲದ ಪ್ರದೇಶಕ್ಕೆ ಹೋಗುವ ಜಾಣತನದ್ದಲ್ಲದ ಸಾಹಸಕ್ಕೆ 900 ಕೋಟಿ ರೂ ವೆಚ್ಚ ಮಾಡಲಾಗಿದೆ” ಎಂದು ಭಾರತವನ್ನು ಮತ್ತೆ ಟೀಕಿಸಿದ್ದರು. ಇದು ಕೂಡ ಭಾರತ ಹಾಗೂ ಪಾಕಿಸ್ತಾನಿಯರಿಂದ ಟ್ರೋಲ್‌ಗೆ ಗುರಿಯಾಗಿತ್ತು.