ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಗುಡ್ನ್ಯೂಸ್! – ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿನ, ಕುಂಕುಮ & ಬಳೆ ಗಿಫ್ಟ್!
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ನೀಡಿದೆ. ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಮನೆ ಯಜಮಾನಿಗೆ 2,000 ರೂಪಾಯಿ ಹಣ ಖಾತೆಗೆ ಜಮೆ ಮಾಡುವ ಯೋಜನೆಯೂ ಕೂಡ ಸದ್ಯದಲ್ಲೇ ಜಾರಿಯಾಗಲಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಆಗಸ್ಟ್ 25 ರಂದು ವರಮಹಾಲಕ್ಷ್ಮೀ ಹಬ್ಬ ಇದೆ. ರಾಜ್ಯದ ಮಹಿಳೆಯರು ವರಮಹಾಲಕ್ಷ್ಮೀದ ತಯಾರಿಯಲ್ಲಿದ್ದಾರೆ. ಹಬ್ಬದ ದಿನದಂದು ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ಗಿಫ್ಟ್ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: ಇನ್ನೂ ಬಗೆಹರಿಯದ ತಾಂತ್ರಿಕ ದೋಷ – 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಪಾವತಿಯಾಗಿಲ್ಲ ಅನ್ನಭಾಗ್ಯದ ಹಣ
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇಗುಲಗಳಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿಣ-ಕುಂಕುಮ, ಹಸಿರು ಬಳೆಗಳನ್ನು ಗೌರವಸೂಚಕವಾಗಿ ನೀಡಬೇಕು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆ ಉಲ್ಲೇಖಿಸಿದೆ.
ಈ ತಿಂಗಳ 25ರ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತ ನಡೆಯಲಿದೆ. ಈ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ನೀಡಲಾಗುತ್ತದೆ. ಆಯಾ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ- ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದಿಟ್ಟು ಪೂಜಿಸಿ, ಗೌರವ ಪೂರ್ವಕವಾಗಿ ಮಹಿಳೆಯರಿಗೆ ನೀಡಲು ಆದೇಶಿಸಲಾಗಿದೆ.
ಇದರ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ಭರಿಸಲು ತಿಳಿಸಲಾಗಿದೆ. ಪ್ರಸಾದ ರೂಪವಾದ ಅರಿಶಿಣ, ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡಲು ಸೂಚಿಸಲಾಗಿದೆ.