ಇಸ್ರೋಗೆ ಮತ್ತೊಂದು ಯಶಸ್ಸು – ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ ಲ್ಯಾಂಡರ್!
ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಚಂದ್ರಯಾನ-3 ಗಗನನೌಕೆಯು ಹಂತ ಹಂತವಾಗಿ ವಿಜ್ಞಾನಿಗಳಿಗೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ರವಾನಿಸುತ್ತಾ, ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿ ಕಳುಹಿಸುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಖುಷಿ ವಿಚಾರವನ್ನು ಇಸ್ರೋ ಹಂಚಿಕೊಂಡಿದೆ. ಕಳೆದ ಐದು ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿ ಏಕಾಂಗಿಯಾಗಿ ಸುತ್ತುತ್ತಿದ್ದ ಚಂದ್ರಯಾನ-2 ಆರ್ಬಿಟರ್, ಸೋಮವಾರ ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ನೊಂದಿಗೆ ಸಂಪರ್ಕ ಸಾಧಿಸಿದೆ.
ಇದನ್ನೂ ಓದಿ: ಚಂದಿರನಿಗೆ ಇನ್ನಷ್ಟು ಸನಿಹವಾದ ಚಂದ್ರಯಾನ – 3 – ಲ್ಯಾಂಡರ್ ಇಳಿಯಲು ಸೇಫ್ ಆದ ಜಾಗ ಹುಡುಕುತ್ತಿರುವ ನೌಕೆ
ಹೌದು, ಭಾರತೀಯ ಬಾಹ್ಯಕಾಶ ಸಂಸ್ಥೆ ಕಳೆದ ವರ್ಷ ಚಂದ್ರಯಾನ -2 ನೌಕೆಯನ್ನು ಚಂದ್ರನ ಅಂಗಳಕ್ಕೆ ಕಳುಹಿಸಿತ್ತು. ಕೊನೆ ಹಂತದಲ್ಲಿ ಚಂದ್ರಯಾನ-2 ಆರ್ಬಿಟರ್ ಸಂಪರ್ಕ ಕಳೆದುಕೊಂಡಿತ್ತು. ಮತ್ತೆ ಸಂಪರ್ಕಿಸಲು ಸಾಧ್ಯವಾಗಿರಲ್ಲಿಲ್ಲ. ಇದೀಗ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ-2 ಆರ್ಬಿಟರ್ ಸೋಮವಾರ ಚಂದ್ರಯಾನ – 3ಯ ವಿಕ್ರಮ್ ಲ್ಯಾಂಡರ್ನೊಂದಿಗೆ ಸಂಪರ್ಕ ಸಾಧಿಸಿದೆ. ಈ ಬಗ್ಗೆ ಇಸ್ರೋ ಅಧಿಕೃತ ಮಾಹಿತಿ ನೀಡಿದೆ. ಅದರೊಂದಿಗೆ ಚಂದ್ರಯಾನ – 3 ಯ ಯಶಸ್ಸು ಚಂದ್ರಯಾನ-2ರ ಯಶಸ್ಸು ಕೂಡ ಆಗಿರಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ ಸಂಸ್ಥೆ, ‘ವೆಲ್ಕಮ್ ಬಡ್ಡಿ..ಚಂದ್ರಯಾನ – 2 ಆರ್ಬಿಟರ್ ಚಂದ್ರಯಾನ – 3 ಲ್ಯಾಂಡರ್ ಮಾಡ್ಯುಲ್ ಅನ್ನು ಸ್ವಾಗತಿಸಿದೆ. ಇವೆರಡರ ನಡುವೆ ಎರಡೂ ಕಡೆಯ ಸಂಪರ್ಕಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿರುವ ಇಸ್ಟ್ರಾಕ್ಗೆ ಈಗ ಲೂನಾರ್ ಮಾಡ್ಯುಲ್ ಜೊತೆ ಸಂಪರ್ಕ ಸಾಧಿಸಲು ಇನ್ನಷ್ಟು ಮಾರ್ಗಗಳು ಸಿಕ್ಕಂತಾಗಿದೆ’ ಎಂದು ಇಸ್ರೋ ಟ್ವೀಟ್ ಮಾಡಿದೆ.