ಚಂದ್ರಯಾನ -3 ಯಶಸ್ಸಿಗಾಗಿ ನಾಗರ ಪಂಚಮಿಯಂದು ಕುಕ್ಕೆ ಸುಬ್ಯಹ್ಮಣ್ಯದಲ್ಲಿ ವಿಶೇಷ ಪೂಜೆ
ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾದು ನೋಡುತ್ತಿದೆ. ಭೂಮಿಯ ಹೊರತಾದ ಇನ್ನೊಂದು ಆಕಾಶಕಾಯದಲ್ಲಿ ತನ್ನ ನೌಕೆಯನ್ನು ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಯುವ ಪ್ರಯತ್ನ ಮಾಡುತ್ತಿರುವ ಇಸ್ರೋಗೆ ವಿಶ್ವದ ಎಲ್ಲೆಡೆಯಿಂದ ಹಾರೈಕೆಗಳು ಹರಿದುಬರುತ್ತಿದೆ. ಇದೀಗ ಚಂದ್ರಯಾನ -3ಕ್ಕೆ ಯಶಸ್ಸು ಸಿಗಲಿ, ಚಂದ್ರನ ಅಂಗಳಕ್ಕೆ ನೌಕೆ ಸುರಕ್ಷಿತವಾಗಿ ಇಳಿಯಲಿ ಎಂದು ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆ ನೆರವೇರಿಸಲಾಗಿದೆ.
ಇದನ್ನೂ ಓದಿ: ಚಂದಿರನಿಗೆ ಇನ್ನಷ್ಟು ಸನಿಹವಾದ ಚಂದ್ರಯಾನ – 3 – ಲ್ಯಾಂಡರ್ ಇಳಿಯಲು ಸೇಫ್ ಆದ ಜಾಗ ಹುಡುಕುತ್ತಿರುವ ನೌಕೆ
ಚಂದ್ರಯಾನ -3 ಹಂತ ಹಂತವಾಗಿ ಯಶಸ್ಸನ್ನು ಕಾಣುತ್ತಿದೆ. ಇದೇ ಆಗಸ್ಟ್ 23ರಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಕಟಿಸಿದೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಎಲ್ಲರೂ ಕಾದುಕುಳಿತಿದ್ದಾರೆ. ನಾಗರ ಪಂಚಮಿ ದಿನವಾದ ಒಂದು (ಸೋಮವಾರ) ಇಸ್ರೋ ಹೆಸರಿನಲ್ಲಿ ನಾಗ ದೇವರಿಗೆ ಕಾರ್ತಿಕ ಪೂಜೆಯನ್ನು ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಸೇವೆ ಅಡಿ ಚಂದ್ರಯಾನ 3 ರ ಯಶಸ್ವಿಗೆ ಇಸ್ರೋ ಹೆಸರಲ್ಲಿ ಅರ್ಚನೆ ಮಾಡಲಾಗಿದೆ. ನಾಗದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ, ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡಲಾಗಿದೆ.
ಈವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಯಾವ ದೇಶಗಳೂ ಅಧ್ಯಯನ ಮಾಡಿಲ್ಲ. ಈಗ ಭಾರತವು ಅಲ್ಲಿ ನೀರನ್ನು ಪತ್ತೆ ಮಾಡುವ ಉದ್ದೇಶದಿಂದ ಚಂದ್ರಯಾನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಚಂದ್ರಯಾನ – 2 ಯೋಜನೆಯಡಿ, ಒಂದು ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳುಹಿಸಲಾಗಿತ್ತು. ಆದರೆ, ಅದು ಸಾಫ್ಟ್ ಲ್ಯಾಂಡಿಂಗ್ ಮಾಡದೇ ಚಂದ್ರನಲ್ಲಿ ಇಳಿಯುವಾಗ ಅದರ ಮೇಲ್ಮೈಗೆ ಅಪ್ಪಳಿಸಿ ನಾಶವಾಗಿತ್ತು. ಈಗ, ಚಂದ್ರಯಾನ – 3ರಲ್ಲಿ ಹಿಂದಿನ ವೈಫಲ್ಯಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವಂತೆ ರೂಪಿಸಲಾಗಿದೆ. ಹಾಗಾಗಿಯೇ, ಈ ಯೋಜನೆಯು ಯಶಸ್ವಿಯಾಗಲೆಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ನೆರವೇರಿಸಲಾಗಿದೆ.