ಬೆಳಗಾವಿ ಜಿಲ್ಲೆಯ ವಿಭಜನೆಗೆ ಜೋರಾಯ್ತು ಕೂಗು – ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ಕೈ ನಾಯಕರ ಸಪೋರ್ಟ್

ಬೆಳಗಾವಿ ಜಿಲ್ಲೆಯ ವಿಭಜನೆಗೆ ಜೋರಾಯ್ತು ಕೂಗು – ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ಕೈ ನಾಯಕರ ಸಪೋರ್ಟ್

ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗು ದಶಕಗಳಿಂದಲೂ ಕೂಡ ಕೇಳಿ ಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಚರ್ಚೆ ತೀವ್ರ ಸದ್ದು ಮಾಡುತ್ತಿದೆ. ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಜಿಲ್ಲೆಯ ವಿಭಜನೆಯ ಮಾತುಗಳನ್ನು ಆಡಿದ ಮೇಲಂತೂ ಭಾರೀ ಸಂಚಲನ ಸೃಷ್ಟಿಸಿದೆ. ಬೆಳಗಾವಿಯನ್ನು ವಿಭಜಿಸಿ ಮೂರು ಜಿಲ್ಲೆ ಮಾಡಬೇಕೆಂದು ಆಗ್ರಹ ಜೋರಾಗುತ್ತಿದೆ. ಇದೀಗ ಬೆಳಗಾವಿ ಜಿಲ್ಲೆ ವಿಭಜನೆ ಪರವಾಗಿ ಮತ್ತೊಬ್ಬ ಕಾಂಗ್ರೆಸ್​ ನಾಯಕ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ : ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಕೇಸ್‌ ವರ್ಗಾವಣೆ –  ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿ ತನಿಖೆ!

ಕಳೆದ ಮೂರು ದಶಕಗಳಿಂದಲೂ ಕೂಡ ಬೆಳಗಾವಿ (Belagavi) ಜಿಲ್ಲೆಯನ್ನ ವಿಭಜನೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಇದೀಗ ಅಥಣಿ ತಾಲೂಕನ್ನು ಜಿಲ್ಲೆ ಮಾಡಬೇಕೆಂದು ಶಾಸಕ ರಾಜು ಕಾಗೆ (Raju Kage) ಧ್ವನಿ ಎತ್ತಿದ್ದಾರೆ. ಅಥಣಿಯನ್ನು ಜಿಲ್ಲೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಶಾಸಕ ರಾಜು ಕಾಗೆ ಅವರಿಗೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿದ ರಾಜು ಕಾಗೆ ನನ್ನ ಬಳಿ ಕೆಲ ನಾಯಕರು ಅಥಣಿ ಜಿಲ್ಲೆ ಮಾಡಲು ಪ್ರಸ್ತಾವನೆ ಕೊಟ್ಟಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತರುವೆ. ನಮ್ಮ ಸಹಪಾಠಿ, ಅಥಣಿ ಶಾಸಕ ಲಕ್ಷ್ಮಣ್ ಸವದಿ ವಿದೇಶ ಪ್ರವಾಸದಲ್ಲಿ ಇದ್ದಾರೆ. ಸೆಪ್ಟೆಂಬರ್ 9ರಂದು ವಾಪಸ್ ಬರುತ್ತಾರೆ. ಅವರು ಮರಳಿ ಬಂದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು. ಮುಖ್ಯಮಂತ್ರಿಗಳ ಬಳಿ ನಮ್ಮ ಪ್ರಸ್ತಾವನೆಯನ್ನು ಇಡುತ್ತೇವೆ. ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ಜನ ಜಿಲ್ಲೆಗೆ ಬೇಡಿಕೆ ಇಡುತ್ತಿದ್ದಾರೆ. ಅದೇರೀತಿ ಅಥಣಿಯನ್ನು ಕೂಡ ಜಿಲ್ಲೆ ಮಾಡುವಂತೆ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಅಥಣಿ, ಕಾಗವಾಡ, ರಾಯಬಾಗ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ, ಬನಹಟ್ಟಿ ಸೇರಿಸಿ ಅಥಣಿ ಜಿಲ್ಲೆ ಮಾಡಬೇಕು. ಅಥಣಿಯಿಂದ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಲು 200 ಕಿಮೀ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಜನರ ಅನುಕೂಲ, ಅಭಿವೃದ್ಧಿ ದೃಷ್ಟಿಯಿಂದ ಅಥಣಿಯನ್ನು ಜಿಲ್ಲೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ. ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ್, ಚಿಕ್ಕೋಡಿಯನ್ನು ಜಿಲ್ಲೆ ಮಾಡುವಂತೆ ಆಗ್ರಹಿಸುವುದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬೈಲಹೊಂಗಲ ಹಾಗೂ ಅಥಣಿ ತಾಲೂಕಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

suddiyaana