ಚಂದ್ರಯಾನ-3 ಲ್ಯಾಂಡಿಂಗ್‌ ದಿನಾಂಕ, ಸಮಯ ಬಹಿರಂಗ! – ಮಹತ್ವದ ಮಾಹಿತಿ ಹಂಚಿಕೊಂಡ ಇಸ್ರೋ

ಚಂದ್ರಯಾನ-3 ಲ್ಯಾಂಡಿಂಗ್‌ ದಿನಾಂಕ, ಸಮಯ ಬಹಿರಂಗ! – ಮಹತ್ವದ ಮಾಹಿತಿ ಹಂಚಿಕೊಂಡ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ( ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್​ ಯಶಸ್ಸಿನ ಸನಿಹದಲ್ಲಿದೆ. ಚಂದ್ರಯಾನ – 3 ರ ವಿಕ್ರಮ್‌ ಲ್ಯಾಂಡರ್‌ ಯಾವಾಗ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ? ಎಷ್ಟು ಗಂಟೆಗೆ ಲ್ಯಾಂಡಿಂಗ್‌ ಆಗಲಿದೆ ಎಂಬ ಮಾಹಿತಿಯನ್ನು ಇಸ್ರೋ ನೀಡಿದೆ.

ಈ ಬಗ್ಗೆ ಇಸ್ರೋ ತನ್ನ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್, ಚಂದಮಾಮನ ಅಂಗಳದಲ್ಲಿ ಇಳಿಯುವ ಪ್ರಕ್ರಿಯೆಯು ಆಗಸ್ಟ್ 23ರಂದು ನಡೆಯಲಿದೆ. ವಿಕ್ರಮ್ ಲ್ಯಾಂಡರ್‌ನ ಎರಡನೇ ಹಾಗೂ ಕೊನೆಯ ವೇಗ ತಗ್ಗಿಸುವ ಹಂತವು ಯಶಸ್ವಿಯಾಗಿ ನಡೆದ ಬಳಿಕ ಅದು ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ – ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!

“ಚಂದ್ರಯಾನ- 3 ಆಗಸ್ಟ್ 23ರಂದು ಸಂಜೆ 6:04ರ ವೇಳೆಗೆ ಚಂದ್ರನ ಮೇಲೆ ಲ್ಯಾಂಡ್ ಆಗಲು ಸಿದ್ಧವಾಗಿದೆ. ನಿಮ್ಮ ಹಾರೈಕೆ ಮತ್ತು ಸಕಾರಾತ್ಮಕತೆಗಳಿಗೆ ಧನ್ಯವಾದಗಳು. ಈ ಪಯಣವನ್ನು ಜತೆಯಾಗಿ ಅನುಭವಿಸುವುದನ್ನು ಮುಂದುವರಿಸೋಣ” ಎಂದು ಇಸ್ರೋ ನೇರ ಪ್ರಸಾರದ ಲಿಂಕ್‌ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯ ದಿನಾಂಕ, ಸಮಯ ಮತ್ತು ಅದನ್ನು ವೀಕ್ಷಿಸುವುದು ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ.

ಆಗಸ್ಟ್ 23ರ ಸಂಜೆ 6:04 ಗಂಟೆಗೆ ಚಂದ್ರಯಾನ- 3 ದಕ್ಷಿಣ ಧ್ರುವದ ಮೇಲೆ ಇಳಿಸಲು ಸಿದ್ಧತೆ ನಡೆಸಲಾಗಿದೆ . ಇದರ ಪ್ರಕ್ರಿಯೆ ಸಂಜೆ 5.45ರ ಹಾಗೆ ಆರಂಭವಾಗಲಿದೆ. ಸಂಜೆ 5:27ರಿಂದ ಭಾರತದ ಮೂರನೇ ಚಂದ್ರಯಾನ ಯೋಜನೆಯ ನೇರ ಪ್ರಸಾರ ವೀಕ್ಷಿಸಬಹುದು. ಡಿಡಿ ನ್ಯಾಷನಲ್ ಚಾನೆಲ್ ಈ ಅಪರೂಪದ ವಿದ್ಯಮಾನದ ನೇರ ಪ್ರಸಾರ ಮಾಡಲಿದೆ. ಇನ್ನು ಖಾಸಗಿ ಸುದ್ದಿ ವಾಹಿನಿಗಳು ಕೂಡ ಲ್ಯಾಂಡಿಂಗ್ ಸಂದರ್ಭವನ್ನು ನೇರ ಪ್ರಸಾರ ಮಾಡಲಿವೆ. https://isro.gov.in, ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್, ಇಸ್ರೋದ ಅಧಿಕೃತ ಫೇಸ್‌ಬುಕ್ ಚಾನೆಲ್. ಇಸ್ರೋದ ಟ್ವಿಟ್ಟರ್ ಹ್ಯಾಂಡಲ್‌ನಿಂದ ಈ ಕೊಂಡಿಗಳು ಲಭ್ಯವಾಗಲಿವೆ ಎಂದು ಇಸ್ರೋ ತಿಳಿಸಿದೆ.

ಲ್ಯಾಂಡರ್ ಮಾಡ್ಯೂಲ್‌ನ ಆಂತರಿಕ ಪರಿಶೀಲನೆ ನಡೆಯಲಿದ್ದು, ಲ್ಯಾಂಡರ್ ಇಳಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಸೂರ್ಯೋದಯ ಆಗುವವರೆಗೂ ಕಾಯಬೇಕಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನೌಕೆಯನ್ನು ಇಳಿಸುವ ತನ್ನ ಎರಡನೇ ಪ್ರಯತ್ನ ಸಫಲವಾಗಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ. ಚಂದ್ರಯಾನ- 2ರಲ್ಲಿ ಉಂಟಾಗಿದ್ದ ವೈಫಲ್ಯವನ್ನು ಸರಿಪಡಿಸಿ, ಬಾರಿ ತಗ್ಗು ದಿಣ್ಣೆ, ಹೊಂಡಗಳ ನೆಲದ ಮೇಲೆ ವಿಕ್ರಮ್ ಲ್ಯಾಂಡರ್‌ ಅನ್ನು ಇಳಿಸುವ ದೊಡ್ಡ ಸವಾಲು ಇಸ್ರೋ ಮುಂದಿದೆ.

suddiyaana