ಹಣ ಕೊಟ್ಟವರಿಗೆ ಬೇಕಂತೆ ಸಾಲ ಪಡೆದವನ ಹೆಂಡತಿಯ ನಗ್ನ ವಿಡಿಯೋ – ಬೆತ್ತಲೆ ವಿಡಿಯೋಕ್ಕಾಗಿ ಪೀಡಿಸಿದ ಗಂಡನ ವಿರುದ್ಧ ಪತ್ನಿ ಕಂಪ್ಲೇಂಟ್
ಆಕೆಗಿನ್ನೂ 20 ವರ್ಷ. ಮದುವೆಯಾದ ಮೇಲೆ ಗಂಡನ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಮದುವೆಯಾದ ಹೊಸತರಲ್ಲಿ ಗಂಡ ಮತ್ತು ಹೆಂಡತಿ ಅನ್ಯೋನ್ಯವಾಗಿದ್ದರು. ಆಮೇಲೆ ಗಂಡನಿಗೆ ದುಡಿದು ತಿನ್ನಲು ಮನಸಿಲ್ಲವೋ ಮತ್ತೊಂದೋ.. ಸ್ನೇಹಿತರ ಬಳಿ, ಅವರಿವರ ಬಳಿ ಹಣ ಪಡೆದಿದ್ದಾನೆ. ನಂತರ ಹಣ ವಾಪಸ್ ಮಾಡಲು ಮಾತ್ರ ಗಂಡ ಕಂಡುಕೊಂಡ ದಾರಿ ನೀಚತನದ್ದು. ಹೆಂಡತಿಯನ್ನು ಪ್ರೀತಿಸಬೇಕಾದ, ಹೆಂಡತಿಯ ಮಾನ ಪ್ರಾಣ ಕಾಪಾಡಬೇಕಾದ ಗಂಡನೇ ಹೆಂಡತಿಗೆ ನೀಚಕೃತ್ಯ ಮಾಡಲು ಒತ್ತಾಯಿಸಿದ್ದಾನೆ.
ಇದನ್ನೂ ಓದಿ: ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು
ಗಂಡನ ನೀಚತನಕ್ಕೆ ಬೇಸತ್ತ ಪತ್ನಿ, ತನ್ನ ಮಾನ ಉಳಿಸಿಕೊಳ್ಳಲು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈಕೆಯ ಪತಿ ಬಂಕಲಂ ಮೂಲದವನು. ಮದುವೆಯಾದ ಬಳಿಕ ದಂಪತಿ ಪಾಲಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಪತಿ ಕೆಲ ವ್ಯಕ್ತಿಗಳಿಂದ ಹಣ ಪಡೆದಿದ್ದಾನೆ. ಅಂತೆಯೇ ಹಣ ಕೊಟ್ಟವರು ಪತಿಯ ಬೆನ್ನು ಬಿದ್ದಿದ್ದಾರೆ. ಅಲ್ಲದೆ ಅದರಲ್ಲಿ ಓರ್ವ, ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವೀಡಿಯೋ ಕರೆ ಮಾಡಲು ಒತ್ತಾಯಿಸಿದ್ದಾನೆ. ಅಂತೆಯೇ ಪತಿಯು ನಗ್ನವಾಗಿ ಇರುವಾಗ ವೀಡಿಯೋ ಕರೆ ಮಾಡುವಂತೆ ಪತ್ನಿಯನ್ನು ಪದೇ ಪದೇ ಪೀಡಿಸಿದ್ದಾನೆ. ಬೆದರಿಕೆ ಹಾಕಿ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ ಅನ್ನೋ ಆರೋಪವೂ ಇದೆ. ಸದ್ಯ ನೀಲೇಶ್ವರಂ ಪೊಲೀಸರು ಮಹಿಳೆಯ ದೂರು ಸ್ವೀಕರಿಸಿದ್ದಾರೆ. ಅಲ್ಲದೆ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.