ಚಂದ್ರನ ಮೇಲ್ಮೈನ ಮೊದಲ ಚಿತ್ರ ಕಳುಹಿಸಿದ ರಷ್ಯಾದ ಲೂನಾ-25
ಚಂದ್ರಯಾನ – 3 ರ ಪ್ರತಿಸ್ಪರ್ಧಿ ರಷ್ಯಾದ ಲೂನಾ – 25 ಈಗಾಗಲೇ ಚಂದ್ರನ ಕಕ್ಷೆ ಪ್ರವೇಶಿಸಿದೆ. ಇದೀಗ ಲೂನಾ – 25 ಮೊದಲ ಬಾರಿಗೆ ಚಂದ್ರನ ಮೇಲ್ಮೈನ ಫೋಟೋವನ್ನು ಕಳುಹಿಸಿದೆ.
ಲೂನಾ – 25 ಕಳುಹಿಸಿರುವ ಚಂದ್ರನ ಮೇಲ್ಮೈನ ಮೊದಲ ಚಿತ್ರವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಝೀಮನ್ ಕುಳಿ ಚಿತ್ರವನ್ನು ತೆಗೆಯಲಾಗಿದೆ. ‘ಡಾರ್ಕ್ ಸೈಡ್’ ಎಂದೂ ಕರೆಯಲ್ಪಡುವ ಈ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಭೂಮಿಯ ನೋಟದಿಂದ ಶಾಶ್ವತವಾಗಿ ಮರೆಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ ಸೂರ್ಯ! – ಏನಿದು ಶೂನ್ಯ ನೆರಳು ದಿನ?
ಈ ಕುಳಿ ಭೂವೈಜ್ಞಾನಿಕವಾಗಿ ಕುತೂಹಲಕಾರಿ ತಾಣವಾಗಿದೆ. ಹೊಸ ಚಿತ್ರಗಳು ಈ ಕುಳಿಯ ಬಗ್ಗೆ ಅಮೂಲ್ಯವಾದ ಹೆಚ್ಚುವರಿ ಮಾಹಿತಿ ಒದಗಿಸುತ್ತವೆ. ಸೋವಿಯತ್ ಒಕ್ಕೂಟದ ಲೂನಾ-3 ಬಾಹ್ಯಾಕಾಶ ನೌಕೆಯು ಅಕ್ಟೋಬರ್ 1959 ರಲ್ಲಿ ಚಂದ್ರನ ಮೇಲ್ಮೈನ ಚಿತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ರವಾನಿಸಿತ್ತು. ಲೂನಾ-25 ಮಿಷನ್ ಚಂದ್ರನ ಪರಿಶೋಧನೆಯ ಈ ಪರಂಪರೆಯನ್ನು ಮುಂದುವರಿಸಿದೆ.
ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಲಿದೆ ಎಂದು ತಿಳಿಸಲಾಗಿದೆ. ಲೂನಾ-25 ಉಡಾವಣೆಗೊಂಡ ಕೆಲವೇ ದಿನಗಳಲ್ಲಿ ಚಂದ್ರನ ಕಕ್ಷೆ ತಲುಪಿದೆ.