ಇನ್ನು ಮುಂದೆ ಕಸ ಹಾಕಿದರೆ ಲೈಸನ್ಸ್ ರದ್ದು! – ರಾತ್ರಿ 10ರ ನಂತರ ಚಾಮುಂಡಿ ಬೆಟ್ಟಕ್ಕೆ ಹೋದ್ರೆ ದಂಡ!

ಇನ್ನು ಮುಂದೆ ಕಸ ಹಾಕಿದರೆ ಲೈಸನ್ಸ್ ರದ್ದು! – ರಾತ್ರಿ 10ರ ನಂತರ ಚಾಮುಂಡಿ ಬೆಟ್ಟಕ್ಕೆ ಹೋದ್ರೆ ದಂಡ!

ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಲೇ ಇದೆ. ಪ್ಲಾಸ್ಟಿಕ್ ಹಾವಳಿ ತಡೆಗೆ ಸರ್ಕಾರದಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ಇದೀಗ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಈ ವೇಳೆ ಸಿಬ್ಬಂದಿಗಳು ಸ್ವಚ್ಛತೆಗೆ ಎಷ್ಟೇ ಆದ್ಯತೆ ನೀಡಿದರೂ, ಅನೇಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಚಾಮುಂಡಿಬೆಟ್ಟದ ನೈಸರ್ಗಿಕ ಪರಿಸರವನ್ನು ಕಾಪಾಡಲು ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಚಾಮುಂಡಿಬೆಟ್ಟವನ್ನು ಕಸ, ಪ್ಲಾಸ್ಟಿಕ್ ಮುಕ್ತ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಇನ್ಮುಂದೆ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಿಸಾಡಿದ್ರೆ 500 ರೂಪಾಯಿ ದಂಡವನ್ನ ವಿಧಿಸಲಾಗುವುದು ಎಂದು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ.

ಇದನ್ನೂ ಓದಿ: ಚಂದ್ರಯಾನ-3 ಗೆ ಮತ್ತೊಂದು ಯಶಸ್ಸು – ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!

ಮೊದಲ ಬಾರಿಗೆ ತ್ಯಾಜ್ಯ ಬಿಸಾಡಿದ್ರೆ 2,500 ಸಾವಿರ, 2ನೇ ಬಾರಿಗೆ 5 ಸಾವಿರ, 3ನೇ ಬಾರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಲೈಸೆನ್ಸ್ ಅನ್ನು ರದ್ದು ಮಾಡಲಾಗುವುದು. ಇನ್ನು ಅರಣ್ಯ ಪ್ರದೇಶದ ಒಳಗೆ ತೆರಳಿದ್ರೆ 500 ರೂಪಾಯಿ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ 1,000 ರೂ., ರಾತ್ರಿ 10 ಗಂಟೆ ನಂತರ ಬೆಟ್ಟ ಪ್ರವೇಶಿಸಿದರೆ 2,500 ರೂಪಾಯಿ, ಮದ್ಯ, ಹಾನಿಕಾರಕ ವಸ್ತುಗಳನ್ನು ಸಾಗಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.  ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುವುದೆಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸೆ. 1ರಿಂದಲೇ ಈ ನೂತನ ನಿಯಮ ಜಾರಿಯಾಗಲಿದೆ.

ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕತೆ ಜೊತೆಗೆ ಇಲ್ಲಿನ ನೈಸರ್ಗಿಕ ಸೌಂದರ್ಯ ಎಂಥವರನ್ನೂ ತಮ್ಮತ್ತ ಸೆಳೆಯುತ್ತದೆ. ಇದನ್ನ ಕಾರಣವಾಗಿಟ್ಟುಕೊಂಡು ಯುವ ಸಮೂಹ ರಾತ್ರಿ ವೇಳೆ ಮೋಜು ಮಸ್ತಿ ನಡೆಸುತ್ತಿದೆ. ಕೆಲ ಪುಂಡ ಯುವಕರು ಎಣ್ಣೆ ಪಾರ್ಟಿ ಮಾಡಿ ಹುಚ್ಚಾಟ ನಡೆಸುತ್ತಿದ್ದಾರೆ. ಹೀಗಾಗಿಯೇ ರಾತ್ರಿ 10 ರ ನಂತ್ರ ಬೆಳಗ್ಗೆ 5ರವರೆಗೆ ಕೇವಲ ಬೆಟ್ಟದ ನಿವಾಸಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅನಗತ್ಯ ರೂಲ್ಸ್ ಬ್ರೇಕ್ ಮಾಡಿದ್ರೆ 2500 ದಂಡದ ಜೊತೆ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಚಿಂತನೆ ನಡೆಸಲಾಗಿದೆ.

suddiyaana