ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನಕ್ಕೆ 71 ಬಲಿ – 7.5 ಸಾವಿರ ಕೋಟಿ ರೂ. ನಷ್ಟ!
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇದೀಗ ಮಳೆಯ ಅವಾಂತರಕ್ಕೆ ಸುಮಾರು 71 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶ ಮಹಾಮಳೆಗೆ ತತ್ತರಿಸಿ ಹೋಗಿದೆ. ಸಾಕಷ್ಟು ಹಾನಿ ಉಂಟಾಗಿದೆ. ರಾಜ್ಯಾದ್ಯಂತ ಮಳೆಯಿಂದಾದ ದುರ್ಘಟನೆಯಿಂದಾಗಿ ಸುಮಾರು 7,500 ಕೋಟಿ ರೂ. ನಷ್ಟವಾಗಿದೆ. ಜುಲೈಗಿಂತ ಆಗಸ್ಟ್ 13, 14 ಹಾಗೂ 15ರ ಅವಧಿಯಲ್ಲಿ ಮಳೆಯ ಅವಾಂತರದಿಂದಾಗಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ – ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್!
ಅವಘಡ ಸಂಭವಿಸಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ. ಜನರು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿರುವುದರಿಂದ ಈ ಅಂದಾಜು ಹೆಚ್ಚುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಹಾಗೂ ಸ್ಥಳೀಯ ಜನರು ಸೇರಿದಂತೆ ಸ್ಥಳಾಂತರ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಾಗುತ್ತಿದೆ. ಸುಮಾರು 2,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣೆಯ ಅಂಕಿ ಅಂಶದ ಪ್ರಕಾರ 1,762 ಮನೆಗಳು ಸಂಪೂರ್ಣ ಹಾನಿಯಾಗಿವೆ. 8,952 ಮನೆಗಳು ಭಾಗಶಃ ಹಾನಿಯಾಗಿವೆ. ಈ ವರ್ಷದ ಮುಂಗಾರು ಋತುವಿನಲ್ಲಿ 113 ಭೂಕುಸಿತಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ.
ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಂಗ್ರಾ ಜಿಲ್ಲೆಯಲ್ಲಿ ವೈಮಾನಿಕ ಹಾಗೂ ನೆಲದ ಸಮೀಕ್ಷೆಗಳನ್ನು ನಡೆಸಿದ್ದಾರೆ. ಮಳೆಯ ಅವಾಂತರದಿಂದ ರಾಜ್ಯದಲ್ಲಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ವರ್ಷವೇ ಬೇಕಾಗಬಹುದು ಎಂದಿದ್ದಾರೆ.