ಬರಗಾಲ ಬಂದರೂ ಬೆಣ್ಣೆ ತಿನ್ನುತ್ತಿರುವ ಈ ಸರ್ಕಾರದ ಹಸಿವು ನೀಗುವವರೆಗೂ ರೈತನ ಉಸಿರಿಗಿಲ್ಲ ಗ್ಯಾರಂಟಿ! – ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಬರದ ಬೇಗೆಗೆ ಐವತ್ತಕ್ಕೂ ಹೆಚ್ಚು ತಾಲ್ಲೂಕುಗಳು ತತ್ತರಿಸಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬರಗಾಲ ಬಲಗಾಲಿಟ್ಟು ವಕ್ಕರಿಸಿದೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ 60ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರಕ್ಕೆ ತಡೆಯುವ ಚಿಂತೆ ಇಲ್ಲ. ಬಿತ್ತನೆ ಬೀಜ ದರ ನಿಗ್ರಹಕ್ಕೂ ಸರ್ಕಾರ ಒಪ್ಪುತ್ತಿಲ್ಲ. ಕೃಷಿ ಇಲಾಖೆಯ ಕರ್ಮಕಾಂಡಕ್ಕೆ ಕೊನೆಯಿಲ್ಲ, ರೈತರು ಬಿತ್ತಿದ ಬೀಜ ಮೊಳಕೆ ಒಡೆಯುತ್ತಿಲ್ಲ, ಆದರೂ ಸರ್ಕಾರದ ಕಲೆಕ್ಷನ್ ನಿಲ್ಲುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: 400 ಕೋಟಿ ರೂಪಾಯಿ ಬಾಚಿದ ‘ಜೈಲರ್’ ಸಿನಿಮಾ – ಚಿತ್ರ ಗೆದ್ದ ಖುಷಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್
ರಾಜ್ಯದಲ್ಲಿ ಬರದ ಬೇಗೆಗೆ ಐವತ್ತಕ್ಕೂ ಹೆಚ್ಚು ತಾಲ್ಲೂಕುಗಳು ತತ್ತರಿಸಿವೆ. ಆದರೆ, ಸಿದ್ದರಾಮಯ್ಯ ಆಡಳಿತ ಉತ್ತರ ಹುಡುಕುತ್ತಿಲ್ಲ. ಮಳೆ ಇಲ್ಲದೆ ಜಲಾಶಯಗಳ ತುಂಬುತ್ತಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಮಡಿಲು ಮಾತ್ರ ತುಂಬಿ ತುಳುಕುತ್ತಿದೆ. ಬರಗಾಲ ಬಂದರೂ ತಾನು ಮಾತ್ರ ಬೆಣ್ಣೆ ತಿನ್ನುತ್ತಿರುವ ಈ ಸರ್ಕಾರದ ಹಸಿವು ನೀಗುವವರೆಗೂ ರೈತನ ಉಸಿರಿಗಿಲ್ಲ ಗ್ಯಾರಂಟಿ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಹಿಂದೆಂದೂ ಕೇಳರಿಯದ ರೀತಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಪ್ರವೇಶಕ್ಕೆ ನಿರ್ಬಂಧ ಇರಬೇಕಾದ ಕಲೆಕ್ಷನ್ ಏಜೆಂಟರಿಗೆ ಕರ್ನಾಟಕ ಕಾಂಗ್ರೆಸ್ ಕಚೇರಿಯಲ್ಲೇ ಕುರ್ಚಿ ಮಾತ್ರವಲ್ಲ, ಕೊಠಡಿಯೂ ನೀಡಿ ಸಾಕುತ್ತಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿಗಳನ್ನೂ ಮಾಡದೆ ಎಟಿಎಂ ಸರ್ಕಾರ ಲಂಚವನ್ನೇ ಅಧಿಕೃತಗೊಳಿಸುತ್ತಿದೆ. ಎತ್ತ ಸಾಗುತ್ತಿದೆ ಕರ್ನಾಟಕ..?? ಗೂಂಡಾ ರೌಡಿಯೊಬ್ಬ ಸರ್ಕಾರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಬೇಕೆ..? ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುವ ಬದಲು ಕರ್ನಾಟಕ ಕಾಂಗ್ರೆಸ್ ನ ಧ್ವಜ ಮತ್ತು ಚಿಹ್ನೆ ಮೇಳೈಸಬೇಕೆ..? ಸ್ವಾತಂತ್ರ್ಯ ದಿನದಂತಹ ಪವಿತ್ರ ದಿನದಂದು, ಮಕ್ಕಳು & ಸಾರ್ವಜನಿಕರು ಗೂಂಡಾಗಳ ಭಾಷಣ ಕೇಳುವಂತಾಗಿರುವುದು ದುರಂತ ಎಂದು ಬಿಜೆಪಿ ಕಿಡಿಕಾರಿದೆ.