ಸ್ಪಂದನಾ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ದೊಡ್ಮನೆ ಕುಟುಂಬ – 4 ಸಾವಿರ ಜನರಿಗೆ ಊಟದ ವ್ಯವಸ್ಥೆ
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ 11ನೇ ದಿನದ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದರು. ಸ್ಪಂದನಾ ಅವರ 11 ನೇ ದಿನದ ಕಾರ್ಯವನ್ನು ನಗರದ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿಕೆ ಶಿವರಾಂ ಅವರ ಮನೆಯಲ್ಲಿ ನಡೆಯಿತು. ಈ ವೇಳೆ ಸ್ಪಂದನಾಗೆ ಪುಷ್ಪನಮನ ಸಲ್ಲಿಸಲಾಯ್ತು. ಉತ್ತರಕ್ರಿಯೆಯಲ್ಲಿ ದೊಡ್ಮನೆ ಕುಟುಂಬದವರು ಪಾಲ್ಗೊಂಡಿದ್ದರು. ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಮಗಳು ಕೂಡಾ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಸ್ಪಂದನಾ 5 ನೇ ದಿನದ ಕಾರ್ಯ – ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ
ಸುಮಾರು 3ರಿಂದ 4 ಸಾವಿರ ಜನ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಸಾರ್ವಜನಿಕರಿಗೂ ಅನ್ನಸಂತರ್ಪಣೆ ಮಾಡಲಾಗಿದೆ. 75 ಬಾಣಸಿಗರಿಂದ 2,500 ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಸೇರಿದಂತೆ 21 ಖಾದ್ಯಗಳನ್ನು ರೆಡಿಮಾಡಲಾಗಿದೆ.
ಮಧ್ಯಾಹ್ನ ಸ್ಪಂದನಾ ಉತ್ತರಕ್ರಿಯೆ ಆದ ಮೇಲೆ ರಾತ್ರಿ ಕುಟುಂಬಸ್ಥರಿಂದ ಮಡಪ್ಪಾಜೆ ಹಾಕುವ ಕ್ರಮ ನಡೆಯುತ್ತದೆ. ಮಡಪ್ಪಾಜೆ ಎಂದರೆ ಮೃತಪಟ್ಟ ಮೇಲೆ ಆತ್ಮಗಳು ಹೊರಗೆ ಓಡಾಡಿಕೊಂಡು ಇರುತ್ತವೆ. ಅದನ್ನು ಒಳಗೆ ಕರೆಸಿಕೊಳ್ಳುವ ಕಾರ್ಯಕ್ರಮ. ಇದನ್ನು ರಾತ್ರಿಯ ವೇಳೆ ಮಾಡಲಾಗುವುದು. ಮಡಪ್ಪಾಜೆ ಹಾಕುವ ಸಂದರ್ಭದಲ್ಲಿ ಕೋಳಿಯಿಂದ ಪದಾರ್ಥ ಮಾಡಲಾಗುವುದು. ಇದನ್ನು ಕುಟುಂಬದವರೆಲ್ಲ ಸೇರಿ ಒಂದೆಡೆ ಇಟ್ಟು ಪ್ರಾರ್ಥನೆ ಸಲ್ಲಿಸಲಾಗುವುದು. ಕೊನೆಗೆ ಆತ್ಮವನ್ನು ಒಳಗೆ ಕರೆಸಲಾಗುವುದು ಎಂದು ಶೇಖರ್ ಬಂಗೇರ ಮಾಹಿತಿ ನೀಡಿದ್ದಾರೆ. ಮಡಪ್ಪಾಜೆ ಕಾರ್ಯದಲ್ಲಿ ಭಾಗಿಯಾಗಿ ಪದಾರ್ಥ ಇಟ್ಟು ಪ್ರಾರ್ಥಿಸಿರುತ್ತಾರೊ ಅವರಿಗೆ ಅದನ್ನು ನೀಡಲಾಗುತ್ತದೆ. ಇದರಲ್ಲಿ ಕುಟುಂಬದವರಷ್ಟೇ ಭಾಗಿಯಾಗಿರುತ್ತಾರೆ ಎಂದಿದ್ದಾರೆ. ಇನ್ನು ಸ್ಪಂದನಾ ಅವರ ಆತ್ಮವನ್ನು ಕುಟುಂಬದ ಹಿರಿಯರೊಟ್ಟಿಗೆ ಸೇರಿಸುವ ಕಾರ್ಯವೂ ಇದ್ದು, ಇದನ್ನು ಮೂರು ತಿಂಗಳ ಒಳಗೆ ಮಾಡಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆದಿತ್ತು.