ಗೋಕರ್ಣ ದೇವಸ್ಥಾನದಿಂದ 1.38 ಕೋಟಿ ರೂ. ತೆರಿಗೆ ಬಾಕಿ – ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಐಟಿ ಇಲಾಖೆ ನೋಟಿಸ್

ಗೋಕರ್ಣ ದೇವಸ್ಥಾನದಿಂದ 1.38 ಕೋಟಿ ರೂ. ತೆರಿಗೆ ಬಾಕಿ – ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಐಟಿ ಇಲಾಖೆ ನೋಟಿಸ್

ಧಾರ್ಮಿಕ ಕ್ಷೇತ್ರವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. 1.38 ಕೋಟಿ ರೂ. ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ಬಾಕಿ ತೆರಿಗೆಯಲ್ಲಿ ಸದ್ಯಕ್ಕೆ ಶೇ 20ರಂತೆ 27.65 ಲಕ್ಷ ರೂ. ಪಾವತಿ ಮಾಡಲು ಸೂಚಿಸಿದೆ.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ದೇವಸ್ಥಾನಕ್ಕೆ ಹೋದ ಮಹಿಳೆಗೆ ಪೂಜಾರಿ ಮೇಲೆ ಲವ್ – ಅರ್ಚಕನ ಜೊತೆ ಓಡಿಹೋದವಳು ಅರೆಸ್ಟ್..!

ಜುಲೈ 14ರಂದು ಆದಾಯ ತೆರಿಗೆ ಇಲಾಖೆಯು ಮಹಾಬಲೇಶ್ವರ ದೇವಾಲಯಕ್ಕೆ ನೋಟಿಸ್ ಜಾರಿಗೊಳಿಸಿತ್ತು. 2015-16ನೇ ಸಾಲಿನ ಆದಾಯ ತೆರಿಗೆ ಬಾಕಿ ಉಳಿದಿರುವುದಾಗಿ ನೋಟಿಸ್ ಮೂಲಕ ತಿಳಿಸಿದೆ. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಆದಾಯ ತೆರಿಗೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಶೇ 80ರಷ್ಟು (1,10,60,928) ತೆರಿಗೆಗೆ ನೀಡಿದ ತಡೆಯಂತೆ ಶೇ 20ರಷ್ಟನ್ನು ಪಾವತಿಸಿ ಐದು ದಿನಗಳೊಳಗೆ ಪಾವತಿ ಚಲನ್ ಸಲ್ಲಿಸಲು ಸೂಚಿಸಿದೆ. ಒಂದುವೇಳೆ ಪಾವತಿಸದೇ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆ- 221ರ ಅನ್ವಯ ದಂಡ ಪಾವತಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ್ದ ಮಹಾಬಲೇಶ್ವರ ದೇವಸ್ಥಾನವು ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ್ದೆಂದು 2008ರಲ್ಲಿ ಮಠದವರು ಪ್ರತಿಪಾದಿಸಿದ್ದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಮುಜರಾಯಿ ಇಲಾಖೆಯಿಂದ ಬಿಡುಗಡೆಗೊಳಿಸಿ ಮಠಕ್ಕೆ ವಹಿಸಿತ್ತು. ಅಂದಿನಿಂದ ನ್ಯಾಯಾಲಯದಲ್ಲಿ ಮಠದ ವಿರೋಧಿ ಬಣಗಳ ಕೇಸು, ವಾದ- ವಿವಾದ ಇತ್ಯಾದಿಗಳು ನಡೆದು ಕೊನೆಗೆ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ದೇವಸ್ಥಾನದ ನಿರ್ವಹಣೆಯನ್ನು ಸರಕಾರದಿಂದ ನೇಮಕ ಮಾಡಲಾದ ಸಮಿತಿಗೆ ವಹಿಸುವಂತೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಈವರೆಗೂ ನ್ಯಾ.ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ದೇವಸ್ಥಾನದ ಆಡಳಿತವನ್ನ ನೋಡಿಕೊಳ್ಳುತ್ತಿದೆ. ಸದ್ಯ ಆದಾಯ ತೆರಿಗೆ ಇಲಾಖೆ ನೋಟಿಸ್ನಲ್ಲಿ ತಿಳಿಸಿರುವಂತೆ 2015- 16ನೇ ಸಾಲಿನ ಅವಧಿಯಲ್ಲಿ ದೇವಸ್ಥಾನ ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿತ್ತು. ಹೀಗಾಗಿ ಒಂದುವೇಳೆ ಆದಾಯ ತೆರಿಗೆ ಪಾವತಿಸಬೇಕೆಂದು ಬಂದಲ್ಲಿ ಅದನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ನೀಡಬೇಕು ಹಾಗೂ ಅಂದಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಇದೀಗ ಕೇಳಿಬಂದಿದೆ. ಸದ್ಯ ಆದಾಯ ತೆರಿಗೆ ಇಲಾಖೆಯ 2015- 16ನೇ ಸಾಲಿನ ಬಾಕಿ ತೆರಿಗೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿರುವುದರಿಂದ ಸೋಮವಾರ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಯ ಸಭೆ ನಡೆದಿದೆ. ಸಭೆಯಲ್ಲಿ, 2008ರಿಂದ ಈವರೆಗಿನ ಲೆಕ್ಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಣಿತ ಲೆಕ್ಕ ಪರಿಶೋಧಕರನ್ನು ನೇಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

suddiyaana