ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ ಪ್ರಕರಣ- ದೂರು ಕೊಟ್ಟ ಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ ಪ್ರಕರಣ- ದೂರು ಕೊಟ್ಟ ಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿನ ನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ. ಇದೀಗ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರಹ್ಲಾದ್‌ ಅವರಿಗೇ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

ಕಳೆದ ಶುಕ್ರವಾರ  ಸಂಜೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯಲ್ಲಿ ಬೆಂಕಿ ಅವಘಡ ಸಂಭವಿಸಿ ವಿಭಾಗದ ಮುಖ್ಯ ಎಂಜಿನಿಯರ್‌ ಸೇರಿದಂತೆ ಒಂಬತ್ತು ಮಂದಿ ಬೆಂಕಿಯಿಂದ ಸುಟ್ಟು ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್‌ ಪೊಲೀಸರು ಪ್ರಹ್ಲಾದ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ – ದೇಶ ನಿಮ್ಮ ಜೊತೆಗಿದೆ.. ಶಾಂತಿ ಕಾಪಾಡಲು ಮಣಿಪುರದ ಜನತೆಗೆ ಮೋದಿ ಮನವಿ  

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ನಾನೇ ದೂರು ನೀಡಿದ್ದೇನೆ. ಆದರೆ, ತಮಗೇ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಕಾನೂನು ಕೋಶದ ತಜ್ಞರಿಂದ ಸಲಹೆ ಪಡೆಯಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿದ್ದಾರೆ. ಜತೆಗೆ, ಪೊಲೀಸರ ವರ್ತನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಪೊಲೀಸರು ನೀಡಿರುವ ನೋಟಿಸ್‌ ತಮಗೆ ತಲುಪಿಲ್ಲ, ಕಚೇರಿಗೂ ಬಂದಿಲ್ಲ ಎಂದು ಹೇಳಿದ್ದಾರೆ.

ಬೆಂಕಿ ಅವಘಡ ಸಂಭವಿಸಿದ ಗುಣ ನಿಯಂತ್ರಣ ಕೊಠಡಿಯಲ್ಲಿ ಏನೆಲ್ಲಾ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಯಾವ್ಯಾವ ಮುನ್ನೆಚ್ಚರಿಕೆ ಕ್ರಮ ಇರಬೇಕಾಗಿತ್ತು, ಯಾವ ಹಂತದ ಅಧಿಕಾರಿಗಳು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು, ತಂತ್ರಜ್ಞರೇ, ರಾಸಾಯನಿಕ ತಜ್ಞರೇ, ಯಾವೆಲ್ಲಾ ವಸ್ತು ಮತ್ತು ಕಾಮಗಾರಿಯ ಪರೀಕ್ಷೆ ನಡೆಸಲಾಗುತ್ತದೆ ಎಂಬ ಸಮಗ್ರ ಮಾಹಿತಿಯನ್ನು ದಾಖಲೆ ಸಮೇತ ನೀಡಿ ತನಿಖೆಗೆ ಸಹಕರಿಸುವಂತೆ ಹಲಸೂರು ಗೇಟ್‌ ಪೊಲೀಸರು ಪ್ರಹ್ಲಾದ್‌ ಅವರಿಗೆ ನೋಟಿಸ್‌ ನೀಡಿದ್ದಾರೆ.

ಗಾಯಗೊಂಡವರು ಚೇತರಿಕೆ ಗಾಯಗೊಂಡ ಒಂಬತ್ತು ಮಂದಿ ಪೈಕಿ ಆರು ಮಂದಿಯ ಆರೋಗ್ಯದಲ್ಲಿ ಸುಧಾರಿಸಿದ್ದು, ನಾಲ್ಕೈದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಉಳಿದ ಮೂರು ಮಂದಿಯ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸೋಮವಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಇನ್ನು ಬೆಂಕಿ ಅವಘಡ ಸಂಭವಿಸಿದ ಗುಣ ನಿಯಂತ್ರಣ ಲ್ಯಾಬ್‌ ಸ್ಥಳಾಂತರ ಮಾಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸೂಚಿಸಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಪೌರ ಸಭಾಂಗಣದಲ್ಲಿರುವ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಅಲ್ಲಿಗೆ ಸ್ಥಳಾಂತರ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

suddiyaana