ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ 7 ಮಂದಿ ಬಲಿ – ಮೂವರು ನಾಪತ್ತೆ
ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭೂಕುಸಿತ ಸಂಭವಿಸುತ್ತಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಸೋಲನ್‌ನ ಕಂದಘಾಟ್‌ನ ಜಾಡೋನ್ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2 ಮನೆಗಳು ಹಾಗೂ ಒಂದು ದನದ ಕೊಟ್ಟಿಗೆ ಕೊಚ್ಚಿಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಮುಖದ ಮೇಲೆ 2 ಸೊಂಡಿಲು.. ಚೂಪಾದ ಹಲ್ಲುಗಳು.. – ಡೈನೋಸಾರ್‌ಗಿಂತ ಮೊದಲು ಭೂಮಿ ಮೇಲೆ ಬದುಕಿದ್ದ ದೈತ್ಯ ಜೀವಿ ಇದು!
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವು ಹಾಗೂ ಬೆಂಬಲವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಾರಿ ಮಳೆಯ ಹಿನ್ನೆಲೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಗುಡ್ಡಗಾಡಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು. ಹಾನಿಯ ಕುರಿತು ಪ್ರತಿಕ್ರಿಯೆಗಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದ ರಸ್ತೆಗಳು ಮುಚ್ಚಿ ಹೋಗಿವೆ. ಭಾರಿ ಮಳೆ ಹಾಗೂ ಭೂಕುಸಿತದಿಂದ ಆಗಿರುವ ಹಾನಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮಳೆಯ ಹಿನ್ನೆಲೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಡಳಿತ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕು ಹಾಗೂ ರಸ್ತೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳನ್ನು ನಿರ್ವಹಿಸಬೇಕು ಎಂದು ಸಿಎಂ ಸಿಎಂ ಸುಖವಿಂದರ್ ಸಿಂಗ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.