ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಬಿಜೆಪಿ ಷಡ್ಯಂತ್ರ! – ಕಾಂಗ್ರೆಸ್ ಆರೋಪ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿನ ಅಗ್ನಿ ಅವಘಡ ಘಟನೆ ಸಂಭವಿಸಿದ ಕೆಲವೇ ಹೊತ್ತಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಅಗ್ನಿ ಅವಘಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬೆಂಕಿ ಅವಘಡ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಇದೊಂದು ಪಿತೂರಿ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. 40 ಪರ್ಸೆಂಟ್ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು ಹಾಗೂ ಇದರ ಹಿಂದಿರುವ ಬಿಜೆಪಿಯ ಭ್ರಷ್ಟರ ಹೆಡೆಮುರಿ ಕಟ್ಟುವುದು ನಿಶ್ಚಿತ’ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: BBMP ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ – ಮೂವರು ಡಿ ಗ್ರೂಪ್ ನೌಕರರು ವಶಕ್ಕೆ
‘40% ಕಮಿಷನ್ನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿರುವ ದುಷ್ಮರ್ಮಿಗಳು ಹಾಗೂ ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿ ಬಿಡುವ ಹುನ್ನಾರ ನಡೆಸಿದೆ’ ಎಂದು ಗಂಭೀರ ಆರೋಪ ಮಾಡಿದೆ.
ಬಿಬಿಎಂಪಿ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹೊತ್ತಿಸಿದ ಪರಿಣಾಮ ಎಂಟು ನೌಕರರಿಗೆ ಗಾಯವಾಗಿದೆ, ಮೂರು ಜನರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರಿಗೂ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ತನಿಖೆಗೆ ಹೆದರಿದ ಭ್ರಷ್ಟರು ನಡೆಸಿದ ಇಂತಹ ಹೀನ ಕೃತ್ಯದ ಹಿಂದಿರುವ ಕೈಗಳಿಗೆ ಕೊಳ ತೊಡಿಸುವುದು ಖಚಿತ. ಈ ಹಿಂದೆ ಬಿಜೆಪಿ ಆಡಳಿತವಧಿಯಲ್ಲಿ ಬಿಬಿಎಂಪಿಗೆ ಬೆಂಕಿ ಇಟ್ಟವರೇ ಇಂದೂ ಸಹ ಇಟ್ಟಿದ್ದಾರೆ ಎಂಬ ಗುಮಾನಿ ಹೆಚ್ಚಿದೆ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಿ ತೆರೆಮರೆಯಲ್ಲಿರುವ ಭ್ರಷ್ಟರನ್ನು ಬಯಲಿಗೆಳೆಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ಮಾಡಿದೆ.
ಇನ್ನು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಪ್ರಮುಖ ದಾಖಲೆಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇದು ಅಸಮರ್ಥ ಸರ್ಕಾರ ಎಂಬುದನ್ನು ಬಹಿರಂಗಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶೇ.40 ಕಮೀಷನ್ ಆರೋಪ ಸಾಬೀತು ಮಾಡಲಾರದೆ ನೀವೇ ಬೆಂಕಿ ಹಚ್ಚಿರಬೇಕು. ನಿಮ್ಮ ಸರ್ಕಾರ, ನಿಮ್ಮ ಅಧಿಕಾರಿಗಳು ಹಾಗೂ ನಿಮ್ಮದೇ ಆಡಳಿತ. ಬೆಂಕಿ ಹಚ್ಚುವ ಕೆಲಸ ನಿಮ್ಮದೇ ಇರಬೇಕು? ನಿಮ್ಮ ಸರ್ಕಾರ ಕಡತಗಳನ್ನು ರಕ್ಷಿಸಲು ಆಗದ ಸರ್ಕಾರವೇ? ಬಿಬಿಎಂಪಿಗೆ ಬೆಂಕಿ ಬಿದ್ದಿದೆ ಎಂದರೆ ನಿಮ್ಮ ಕೈಲಾಗದ ಆಡಳಿತಕ್ಕೆ ಹಿಡಿತ ಕನ್ನಡಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಹತ್ತಿಕೊಂಡಿತೇ ಅಥವಾ ಬೆಂಕಿ ಹಚ್ಚಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯಬೇಕು. ಯಾವುದಾದರೂ ಕಡತ ನಾಶ ಮಾಡಲು ಬೆಂಕಿ ಹಚ್ಚಿದ್ದರೇ ಎಂಬ ವಿವರ ಹೊರಬೇಕಿದೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ರವಿಕುಮಾರ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಆರೋಪ ಮಾಡಿ ಓಡಿ ಹೋಗುವುದು ರೂಢಿಯೊ ಹಾಗೆ ಅವರ ಟ್ವಿಟ್ಟರ್ ಹ್ಯಾಂಡಲ್ ಸಹ!
ಲಂಗು ಲಗಾಮು ಇಲ್ಲದ ಅಯೋಗ್ಯರು ಬಾಯಿಗೆ ಬಂದದ್ದು ಬರೆಯುವುದು ಅದರ ಸತ್ಯತೆಯ ಬಗ್ಗೆ ನಾವು ಬರೆದಾಗ ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗುವುದು.
ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮಹಾನುಭಾವ… pic.twitter.com/VahfHilCQv
— Basanagouda R Patil (Yatnal) (@BasanagoudaBJP) August 12, 2023