ದೇವರ ನಾಡಲ್ಲಿ ದರ್ಶನ ಕೊಟ್ಟ ಮಹಾಬಲಿ – ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತೆ ಈ ಕಪ್ಪೆ!

ದೇವರ ನಾಡಲ್ಲಿ ದರ್ಶನ ಕೊಟ್ಟ ಮಹಾಬಲಿ – ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತೆ ಈ ಕಪ್ಪೆ!

ಮುನ್ನಾರ್​: ಮಳೆಗಾಲ ಬಂತೆಂದರೆ ಸಾಕು ಎಲ್ಲೆಂದರಲ್ಲಿ ಕಪ್ಪೆಗಳು ಕಾಣಿಸಿಕೊಳ್ಳುತ್ತವೆ. ಅವುಗಳು ವಟಗುಟ್ಟುವ ಶಬ್ಧಕ್ಕೆ ಕಿರಿಕಿರಿಯಾಗುವುದು ಸಹಜ. ಆದ್ರೆ ಈ ಕಪ್ಪೆ ಮಾತ್ರ ಯಾರಿಗೂ ಕಾಣಸಿಗುವುದಿಲ್ಲವಂತೆ. ವರ್ಷಕ್ಕೆ ಒಂದು ಬಾರಿ ಮಾತ್ರ ಭೂಮಿಯಿಂದ ಹೊರ ಬಂದು ಕಾಣಿಸಿಕೊಳ್ಳುತ್ತದಂತೆ!

ಹೌದು.. ಮಹಾಬಲಿ ಹೆಸರಿನ ಕಪ್ಪೆಗಳು ವರ್ಷದಲ್ಲಿ 364 ದಿನಗಳ ಕಾಲು ಈ ಕಪ್ಪೆಗಳು ಭೂಮಿಯ ಒಳಗೆ ಇರುತ್ತವಂತೆ. ವರ್ಷದ ಒಂದು ದಿನ ಮಾತ್ರ ಭೂಮಿಯಿಂದ ಹೊರ ಬಂದು ಕಾಣಿಸಿಕೊಳ್ಳತ್ತಂತೆ. ಇದೀಗ ವರ್ಷಕ್ಕೆ ಒಮ್ಮೆ ಮಾತ್ರ ಭೂಮಿಯ ಒಳಗಿಂದ ಹೊರಗೆ ಬರುವ ಮಹಾಬಲಿ ಕಪ್ಪೆಯು ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್​ ಪಟ್ಟಣದ ಬಳಿ ಇರುವ ಅನಕುಲಂ, ಮಂಕುಲಂನಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ವೇಗವಾಗಿ ಕ್ಷೀಣಿಸುತ್ತಿದೆ ಮಂಗಳ ಗ್ರಹದಲ್ಲಿ ಹಗಲು ಹೊತ್ತಿನ ಅವಧಿ! – ನಾಸಾ ವಿಜ್ಞಾನಿಗಳು ಹೇಳಿದ್ದೇನು?  

ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವುಗಳ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ಸಿಸ್ ಎಂದು ಕರೆಯಲಾಗುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಹೊರಗೆ ಬರುವುದರಿಂದ ಇದನ್ನು ಮಹಾಬಲಿ ಕಪ್ಪೆ ಎಂತಲೂ ಕರೆಯುತ್ತಾರೆ. ವರ್ಷದಲ್ಲಿ 364 ದಿನಗಳವರೆಗೆ ಈ ಕಪ್ಪೆಗಳು ಭೂಗತವಾಗಿರುತ್ತವೆ. ಮೊಟ್ಟೆಯನ್ನು ಇಡಲು ಮಾತ್ರ ವರ್ಷಕ್ಕೆ ಒಮ್ಮೆ ಮಾತ್ರ ಹೊರಗೆ ಬರುತ್ತವೆ. ಇದು ಹೊರಗಡೆ ಬಂದರೆ ಕೇರಳದ ಪಾಲಿಗೆ ಶುಭ ಸೂಚನೆಯಾಗಿದೆ. ಏಕೆಂದರೆ, ಪ್ರತಿ ವರ್ಷ ಓಣಂ ಹಬ್ಬಕ್ಕೂ ಮುಂಚೆಯೇ ಇದು ಕಾಣಿಸಿಕೊಳ್ಳುತ್ತದೆ. ಇದೀಗ ಮಹಾಬಲಿ ಮುನ್ನಾರ್​ನಲ್ಲಿ ಕಾಣಿಸಿಕೊಂಡಿದೆ. ಓಣಂ ಹಬ್ಬ ಆಗಸ್ಟ್​ 20 ರಿಂದ ಆಗಸ್ಟ್​ 31ರವರೆಗೆ ನಡೆಯಲಿದೆ.

ನದಿಗಳು ಮತ್ತು ತೊರೆಗಳ ಬಳಿಯ ಮಣ್ಣಿನಲ್ಲಿ ವಾಸಿಸುತ್ತವೆ ಮತ್ತು ಎರೆಹುಳುಗಳು, ಗೆದ್ದಲುಗಳು, ಇರುವೆಗಳು ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಅರಣ್ಯ ಇಲಾಖೆಯ ಶಿಫಾರಸಿನಂತೆ ಮಹಾಬಲಿ ಕಪ್ಪೆಯನ್ನು ರಾಜ್ಯದ ಅಧಿಕೃತ ಕಪ್ಪೆ ಎಂದು ಘೋಷಿಸಲು ಕ್ರಮಕೈಗೊಳ್ಳಲಾಗಿದೆ.

ಈ ಕಪ್ಪೆಯು ಚಿಕ್ಕ ಕಾಲುಗಳನ್ನು ಹೊಂದಿದ್ದು, ಕಡು ಬಣ್ಣದಲ್ಲಿರುತ್ತದೆ. ಇದರ ದೇಹವು ಸುಮಾರು ಏಳು ಸೆಂಟಿಮೀಟರ್ ಉದ್ದವಿರುತ್ತದೆ ಮತ್ತು ಉಬ್ಬಿಕೊಂಡಿರುವಂತೆ ಕಾಣುತ್ತದೆ. ಇದರ ಮೊನಚಾದ ಮೂಗುಗಳಿಂದಾಗಿ ಹಂದಿ ಮೂತಿ ಎಂದೂ ಕರೆಯುತ್ತಾರೆ. ದಪ್ಪ ಸ್ನಾಯುಗಳನ್ನು ಹೊಂದಿರುವ ಸಣ್ಣ ಕಾಲುಗಳು ಮತ್ತು ತೋಳುಗಳು ಮಣ್ಣಿನಲ್ಲಿ ಅಗೆಯಲು ಸಹಾಯ ಮಾಡುತ್ತದೆ. ಆದರೆ, ಅದರ ಹಿಂಗಾಲುಗಳು ತುಂಬಾ ಚಿಕ್ಕದಾದ ಕಾರಣ, ಇತರ ಕಪ್ಪೆಗಳಂತೆ ಇದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜಿಗಿಯುವುದಿಲ್ಲ.

suddiyaana