11 ವರ್ಷಗಳ ಹಿಂದೆ ಕಳ್ಳತನ – ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

11 ವರ್ಷಗಳ ಹಿಂದೆ ಕಳ್ಳತನ – ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

ಕೊಲೆ, ಕಳ್ಳತನ ಸಂಭವಿಸಿದಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ವೇಳೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರಿಂದ ತನಿಖೆ ನಡೆಸಲಾಗುತ್ತದೆ. ಬಳಿಕ ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ವರದಿ ಒಪ್ಪಿಸಲಾಗುತ್ತದೆ. ಇದೀಗ ಸುಮಾರು 11 ವರ್ಷಗಳ ಹಿಂದೆ ನಡೆದ ಎಮ್ಮೆ ಕಳ್ಳತನ ಪ್ರರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇಲ್ಲೊಬ್ಬ ರೈತ ಸಾಕ್ಷಿ ಹೇಳಲು ಕೋರ್ಟ್‌ಗೆ ಎಮ್ಮೆಯನ್ನೇ ಕರೆದುಕೊಂಡು ಬಂದಿದ್ದಾನೆ!

ಹೌದು.. ರಾಜಸ್ಥಾನದ ಜೈಪುರ ಜಿಲ್ಲೆಯ ಚೌಮು ಎಂಬ ಪಟ್ಟಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 11 ವರ್ಷಗಳ ಹಿಂದೆ ಮೂರು ಎಮ್ಮೆಗಳ ಕಳವು ಆಗಿತ್ತು. ಎಮ್ಮೆಗಳ ಮಾಲೀಕರು ಹರ್ಮಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಮ್ಮೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಎರಡು ಎಮ್ಮೆಗಳು ಸಿಕ್ಕಿದ್ದವು. ಅವುಗಳನ್ನು ಮಾಲೀಕ ಚರಣ್ ಸಿಂಗ್ ಸೆರಾವತ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಮಿಯಾ ಮೂಲದ ಅರ್ಷದ್ ಭರತ್‌ಪುರ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯ ಪ್ರಕರಣದ ವಿವರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವನಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: ಜೈಲಿನಿಂದಲೇ ಪ್ರೇಯಸಿ ಜಾಕ್ವೆಲಿನ್‌ಗೆ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್ – ಬರ್ತ್‌ಡೇಗೆ ಲವ್‌ಲೆಟರ್ ಗಿಫ್ಟ್..!

ಪೊಲೀಸರು ಪತ್ತೆಹಚ್ಚಿದ್ದ ಎರಡು ಎಮ್ಮೆಗಳ ಪೈಕಿ ಒಂದು ಎಮ್ಮೆ ಕೆಲವು ವರ್ಷಗಳ ಹಿಂದೆ ಸತ್ತಿತ್ತು. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿಯೇ ಇತ್ತು. ಇತ್ತೀಚೆಗಷ್ಟೇ ಪ್ರಕರಣದ ವಿಚಾರಣೆಯ ಭಾಗವಾಗಿ ಸಾಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಂದಿನ ನಗರ ಪೊಲೀಸ್ ಉಸ್ತುವಾರಿ ಹೀರಾಲಾಲ್ ಸೈನಿ ಮತ್ತು ದೂರುದಾರ ಚರಣ್ ಸಿಂಗ್ ಸೇರಿದಂತೆ ಒಟ್ಟು 21 ಸಾಕ್ಷಿಗಳನ್ನು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ 2 ಎಮ್ಮೆ ಪತ್ತೆಯಾಗಿವೆ ನಂತರ ಒಂದು ಎಮ್ಮೆ ಸಾವನ್ನಪ್ಪಿದೆ.

ಹೀಗಾಗಿ ಈ ಪ್ರಕರಣದ ವಿಚಾರಣೆಯ ದಿನ ಸಾಕ್ಷಿಗಳೊಂದಿಗೆ ಎಮ್ಮೆಯನ್ನು ಕೂಡ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಪ್ರತ್ಯಕ್ಷದರ್ಶಿ ಸುಭಾಷ್ ಚೌಧರಿ ಎಮ್ಮೆಯನ್ನು ಗುರುತಿಸಿದ್ದಾರೆ. ಎಮ್ಮೆಯನ್ನು ನ್ಯಾಯಾಲಯಕ್ಕೆ ಕರೆತಂದಾಗ ನ್ಯಾಯಾಲಯದಲ್ಲಿ ಕುತೂಹಲಕಾರಿ ಚರ್ಚೆ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ಒಟ್ಟು 21 ಸಾಕ್ಷಿಗಳಿದ್ದು, ಅಂದಿನ ನಗರ ಠಾಣೆಯ ಪ್ರಭಾರಿ ಹೀರಾಲಾಲ್ ಸೈನಿ ಮತ್ತು ದೂರುದಾರ ಚರಣ್ ಸಿಂಗ್ ಶೆರಾವತ್ ಸೇರಿದಂತೆ 5 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ಈ ಪ್ರಕರಣದಲ್ಲಿ 16 ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ. ಸುಭಾಷ್ ಚೌಧರಿ ಮತ್ತು ಇತರ ಸಾಕ್ಷಿಗಳು ಹೇಳಿಕೆಗಳಿಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಇದೀಗ ಪ್ರಕರಣದ ವಿಚಾರಣೆಯನ್ನು 2023 ಸೆಪ್ಟೆಂಬರ್ 13ಕ್ಕೆ ಮುಂದೂಡಲಾಯಿತು.

suddiyaana