ಹಗಲಲ್ಲಿ ಸೊಳ್ಳೆ, ರಾತ್ರಿಯಲ್ಲಿ ತಿಗಣೆ ಕಾಟ – ಜೈಲಿಂದ ಹೊರಗೆ ಕರೆದುಕೊಂಡು ಬನ್ನಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೋಳಾಟ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಗೋಳಾಡುತ್ತಿದ್ದಾರೆ. ಬೆಳಗ್ಗೆ ಆದರೆ ಸಾಕು ಸೊಳ್ಳೆ ಕಚ್ಚುತ್ತದೆ. ರಾತ್ರಿಯಾದರೆ ಸಾಕು ತಿಗಣೆಗಳು ಕಚ್ಚುತ್ತಿವೆ. ರಾತ್ರಿ ಹಗಲು ಸೊಳ್ಳೆ ತಿಗಣೆಗಳ ಜೊತೆ ಕಳೆಯಲು ಆಗುತ್ತಿಲ್ಲ. ಜೈಲಿಂದ ಹೊರಗೆ ಕರೆಸಿಕೊಳ್ಳಿ ಎಂದು ಇಮ್ರಾನ್ ಖಾನ್ ವಕೀಲರ ಬಳಿ ಮೊರೆಯಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಪ್ರಧಾನಿಯಾಗಿ ಮೆರೆದ ಇಮ್ರಾನ್ ಖಾನ್ ಗೆ ಈಗ ಮಾಜಿಯಾದ ಮೇಲೆ ಇದೆಂಥಾ ಗತಿ ಬಂತಪ್ಪಾ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗಿ.. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ! – ಮಿಲಿಟರಿ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಸೂಚನೆ
ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಕಾರಾಗೃಹದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದ್ದಾರೆ. ಈಗ ಜೈಲಿನಲ್ಲಿ ಇರಲು ಆಗುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ. ಬೆಳಗ್ಗೆ ಹೊತ್ತು ಸೊಳ್ಳೆ ಕಾಟ, ರಾತ್ರಿ ಹೊತ್ತು ತಿಗಣೆ ಕಾಟದಿಂದ ಬೇಸತ್ತು ಹೋಗಿದ್ದೇನೆ ಎಂದು ವಕೀಲರ ಬಳಿ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ತಮ್ಮ ಜಾಮೀನಿಗೆ ವ್ಯವಸ್ಥೆ ಮಾಡಿ, ಜೈಲಿನಿಂದ ಬಿಡುಗಡೆ ಆಗುವಂತೆ ಮಾಡಿ ಎಂದು ವಕೀಲರ ಬಳಿ ಕೋರಿದ್ದಾರೆ. ಇಮ್ರಾನ್ ಖಾನ್ ಪ್ರಧಾನ ಮಂತ್ರಿ ಆಗಿದ್ದ ವೇಳೆ ತಮ್ಮ ಕಚೇರಿಗೆ ಸಿಕ್ಕ ಉಡುಗೊರೆಗಳನ್ನು ಸರ್ಕಾರದ ಖಜಾನೆಗೆ ಒಪ್ಪಿಸದೆ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಮ್ರಾನ್ ಖಾನ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ನಿರ್ಬಂಧ ಹೇರಿತ್ತು. ಈ ಪ್ರಕರಣದ ಅಡಿ ಜೈಲು ಪಾಲಾಗಿರುವ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಕುಖ್ಯಾತ ಕಾರಾಗೃಹದಲ್ಲಿ ಇಡಲಾಗಿದೆ. ಈ ಕಾರಾಗೃಹವು ಕೈದಿಗಳಿಗೆ ಅತಿ ಹೆಚ್ಚು ನಿರ್ಬಂಧಗಳನ್ನು ಹೇರುವ ಮೂಲಕವೇ ಕುಖ್ಯಾತಿಗೆ ಪಾತ್ರವಾಗಿದೆ. ಕಾರಾಗೃಹದಲ್ಲಿ ಉಗ್ರರನ್ನು ಬಂಧಿಸಿ ಇಡಲಾಗುವ ಕೋಣೆಯಲ್ಲಿ ಇಮ್ರಾನ್ ಖಾನ್ ಅವರನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಅಟ್ಟೋಕ್ ಕಾರಾಗೃಹದಲ್ಲಿ ಕೈದಿಗಳನ್ನು ಭೇಟಿ ಮಾಡಲು ಹೊರಗಿನವರಿಗೆ ಸುಲಭವಾಗಿ ಅವಕಾಶ ಸಿಗೋದೇ ಇಲ್ಲ. ಜೊತೆಗೆ ಕೈದಿಗಳಿಗೆ ಮೂಲ ಸೌಕರ್ಯಗಳೂ ಸಿಗೋದಿಲ್ಲ ಎಂಬ ಆರೋಪಗಳಿವೆ. 70 ವರ್ಷ ವಯಸ್ಸಿನ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಳ್ಳಲಾಗ್ತಿದೆ ಎಂದು ಇಮ್ರಾನ್ ಖಾನ್ ಪರ ವಕೀಲರು ಆರೋಪಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದ ಅಡಿ ಇಮ್ರಾನ್ ಖಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ ಕೂಡಲೇ ಅವರನ್ನು ಅಟ್ಟೋಕ್ ಕಾರಾಗೃಹಕ್ಕೆ ಅಟ್ಟಲಾಗಿತ್ತು. ಸದ್ಯ ಇಮ್ರಾನ್ ಖಾನ್ ಪರ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಈ ನಡುವೆ, ಇಮ್ರಾನ್ ಖಾನ್ ಅವರ ತೆಹ್ರಿಕ್ – ಇ – ಇನ್ಸಾಫ್ ಪಕ್ಷ ಕೂಡಾ ತಮ್ಮ ನಾಯಕನ ಬೆನ್ನಿಗೆ ನಿಂತಿದ್ದು, ಆದಷ್ಟು ಬೇಗ ಇಮ್ರಾನ್ ಖಾನ್ ಬಂಧ ಮುಕ್ತ ಆಗಬೇಕು ಎಂದು ಆಗ್ರಹಿಸುತ್ತಿದೆ. ಖಾನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ ವಕೀಲರು, ಇಮ್ರಾನ್ ಖಾನ್ ಪರಿಸ್ಥಿತಿ ತುಂಬಾ ಹೀನಾಯವಾಗಿದೆ ಎಂದು ಹೇಳಿದ್ದಾರೆ. ಜೈಲಿನ ಸಿ ದರ್ಜೆಯ ಕೋಣೆಯಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಇಮ್ರಾನ್ ಖಾನ್ ಅವರನ್ನು ಇರಿಸಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.