ವ್ಯಕ್ತಿ ಮೃತಪಟ್ಟಿದ್ದಾರೆ ಎಂದ ವೈದ್ಯರು – ಮನೆಗೆ ಕರೆತರುತ್ತಿದ್ದಂತೆ ಎದ್ದು ಕುಳಿತ ಬಿಜೆಪಿ ನಾಯಕ!

ವ್ಯಕ್ತಿ ಮೃತಪಟ್ಟಿದ್ದಾರೆ ಎಂದ ವೈದ್ಯರು – ಮನೆಗೆ ಕರೆತರುತ್ತಿದ್ದಂತೆ ಎದ್ದು ಕುಳಿತ ಬಿಜೆಪಿ ನಾಯಕ!

ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ರೋಗಿ ಉಸಿರಾಡಲು ಶುರು ಮಾಡಿದಂತಹ ಅನೇಕ ಘಟನೆಗಳನ್ನು ನಾವು ಕೇಳಿದ್ದೇವೆ. ಇದೀಗ ಬಿಜೆಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಎದ್ದು ಕುಳಿತಿರುವ ಘಟನೆ ನಡೆದಿದೆ.

ಹೌದು.. ಉತ್ತರಪ್ರದೇಶದ ಆಗ್ರಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬಿಜೆಪಿ ನಾಯಕ ಮಹೇಶ್ ಬಘೇಲ್ ಸೋಮವಾರ ಮನೆಯಲ್ಲಿ ಇದ್ದಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಹೇಶ್ ಬಘೇಲ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಹೀಗಾಗಿ ಅವರ ಮನೆಯವರು ಅಂತಿಮ ಸಂಸ್ಕಾರಕ್ಕಾಗಿ ಅವರ ದೇಹವನ್ನು  ಮನೆ ಬಳಿ ತಂದಿದ್ದರು. ಆದರೆ ಮನೆಯಲ್ಲಿ ಅವರು ಬದುಕಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸ್ಪಂದನಾ ವಿಧಿವಶ – ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಬಳಿ ದೇವಸ್ಥಾನಗಳು ಬಂದ್!

ಮನೆಗೆ ಮಹೇಶ್ ಬಘೇಲ್ ಅವರನ್ನು ಕರೆತರುತ್ತಿದ್ದಂತೆ ಅವರ ದೇಹದಲ್ಲಿ ಚಟುವಟಿಕೆ ಕಂಡು ಬಂದಿದೆ. ಇದನ್ನು ಗಮನಿಸಿದ ಮನೆಯವರು ಕೂಡಲೇ ಅವರನ್ನು ಮತ್ತೆ ಆಸ್ಪತ್ರೆಗೆ ಸಾಗಿಸಿದ್ದಾರೆ.  ಈ ವೇಳೆ ಅವರು ಜೀವಂತವಿರುವುದಾಗಿ ಅವರನ್ನು ತಪಾಸಣೆ ಮಾಡಿದ ವೈದ್ಯರು ಹೇಳಿದ್ದಾರೆ.  ಇದರಿಂದ ಅವರ ಮನೆಯವರು ನಿರಾಳರಾಗಿದ್ದಾರೆ.

ಮಹೇಶ್ ಅವರ ಕುಟುಂಬದವರ ಪ್ರಕಾರ, ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯ  ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಮಹೇಶ್ ಅವರನ್ನು ಸರಾಯ್ ಖ್ವಾಜಾದ ಬಳಿ ಇರುವ ಅವರ ಮನೆಗೆ ಕರೆದುಕೊಂಡು ಬಂದಿದ್ದೆವು.  ಸಂಬಂಧಿಗಳೆಲ್ಲರಿಗೂ ವಿಚಾರ ತಿಳಿಸಿ ಶವಸಂಸ್ಕಾರಕ್ಕೆ  ವ್ಯವಸ್ಥೆ ಮಾಡಲಾಗುತ್ತಿತ್ತು. ಅವರನ್ನು ಮಲಗಿಸಿದ್ದಲ್ಲಿಯೇ ಕುಟುಂಬದವರೆಲ್ಲರೂ ಕುಳಿತು ಅಳುತ್ತಿದ್ದರು. ಈ ವೇಳೆ ಅವರ ಕೈಕಾಲುಗಳು ಅಲುಗುವುದನ್ನು ಅಲ್ಲಿದ್ದವರು ಗಮನಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಈಗ ಅವರು ಆಗ್ರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು,  ಪ್ರಸ್ತುತ ಅವರ ಆರೋಗ್ಯ ಸುಧಾರಿಸಿದ್ದು, ಅವರು ಹುಷಾರಾಗುತ್ತಿದ್ದಾರೆ ಎಂದು ಮಹೇಶ್ ಅವರ ಸೋದರ ಲಖನ್ ಸಿಂಗ್ ಬಘೇಲ್ ತಿಳಿಸಿದ್ದಾರೆ.

ಈ ನಡುವೆ ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸಂತಾಪ ಶ್ರದ್ಧಾಂಜಲಿ ಮಹಾಪೂರವೇ ಹರಿದು ಬಂದಿದೆ. ಆದರೆ ಅವರು ಬದುಕಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಚೇತರಿಕೆಗೆ ಅನೇಕರು ಶುಭ ಹಾರೈಸಿದ್ದಾರೆ.

ಆದರೆ ಈ ರೀತಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ರೋಗಿ ಉಸಿರಾಡಲು ಶುರು ಮಾಡಿದ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಹಲವು ಘಟನೆಗಳು ವರದಿಯಾಗಿವೆ.

suddiyaana