ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರವೊಂದೇ ಗ್ಯಾರಂಟಿ..! ಇದರಲ್ಲಿ ಯಾರ್ಯಾರ ಪಾಲೆಷ್ಟು..? – ಬಿಜೆಪಿ ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ನಡುವಿನ ಟ್ವೀಟ್ ವಾರ್ ಮುಂದುವರಿದಿದೆ. ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರೇ ಭ್ರಷ್ಟ ಸಚಿವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸರಣೀ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರಾದ ಸಿದ್ದರಾಮಯ್ಯ ಅವರೇ ನಿಮ್ಮದೇ ಸಂಪುಟದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಸಂಘರ್ಷ – 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ?
ಈ ಹಿಂದೆ ಶಾಸಕರ ಪತ್ರ ನಕಲು ಎಂದಿದ್ದ ನೀವು, ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ..? ಎಂದು ಬಿಜೆಪಿ ಪ್ರಶ್ನಿಸಿದೆ.
ಕಪೋಲಕಲ್ಪಿತ ಸುಳ್ಳು ಆರೋಪಗಳ ಪುಂಗಿ ಊದಿ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಪಕ್ಷ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ. ಸಚಿವರಾದ ಮೊದಲ ದಿನದಿಂದಲೇ ವಸೂಲಿ, ವರ್ಗಾವಣೆ, ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆದ ಚೆಲುವರಾಯಸ್ವಾಮಿ, 6 ರಿಂದ 8 ಲಕ್ಷ ರೂಪಾಯಿ ಕಮಿಷನ್‌ಗಾಗಿ ತನ್ನ ಇಲಾಖೆಯ ಮೇಲಾಧಿಕಾರಿಗಳನ್ನು ಕಲೆಕ್ಷನ್ ಏಜೆಂಟ್‌ಗಳನ್ನಾಗಿ ಮಾಡಿಕೊಂಡಿದ್ದಾರಂತೆ ನೋಡಿ ಎಂದು ಬಿಜೆಪಿ ಕಾಲೆಳೆದಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಒಂದೇ ಗ್ಯಾರಂಟಿ. ಮಾನ್ಯ ಸಿದ್ದರಾಮಯ್ಯನವರೇ, ಇದರಲ್ಲಿ ಯಾರ್ಯಾರ ಪಾಲೆಷ್ಟು..? ಎಂದು ಪ್ರಶ್ನಿಸಿದೆ.