ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಗಣ್ಯರಿಂದ ಸಂತಾಪ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಗಣ್ಯರಿಂದ ಸಂತಾಪ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸ್ಪಂದನಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿನ್ನಾರಿಮುತ್ತನ ಬಾಳಸಂಗಾತಿ ಸ್ಪಂದನಾ ಇನ್ನಿಲ್ಲ – ಮುದ್ದಿನ ಮಡದಿಯ ಅಗಲಿಕೆಯ ನೋವಿನಲ್ಲಿ ವಿಜಯ್ರಾಘವೇಂದ್ರ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತ ಪಡಿಸಿದ್ದಾರೆ. ‘ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ  ಧರ್ಮಪತ್ನಿ ಬ್ಯಾಂಕಾಕ್  ಪ್ರವಾಸದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ. ಅವರ ನಿಧನ ಎಲ್ಲರಿಗೂ ಆಘಾತ ತಂದಿದೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಆಗಿರೋದು ಯಾರು ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬದವರೂ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಆಘಾತಕಾರಿ ಘಟನೆ’ ಎಂದಿದ್ದಾರೆ. ಮುಂದುವರಿದು ಮಾತನಾಡಿದ ಕುಮಾರಸ್ವಾಮಿ, ‘ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಆಗುತ್ತಿವೆ. ಇದರ ಮೂಲ ಹಿನ್ನೆಲೆ ಕೋವಿಡ್ ನಂತರ ಆದ ಕೆಲ ಸಮಸ್ಯೆ, ಮನುಷ್ಯನ ದೇಹದ ಮೇಲೆ ಆಗಿರೋ ಸಮಸ್ಯೆಗಳಿಂದ ಹೀಗೆ ಆಗ್ತಿದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ, ಜಾಗೃತೆಯಿಂದ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಆಗಾಗ ಚೆಕಪ್ ಮಾಡಿಸಿಕೊಳ್ಳುವ ಕೆಲಸವೂ ಆಗಬೇಕು’ ಎಂದರು. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಕುಟುಂಬದಲ್ಲಿ ದೊಡ್ಡ ನೋವು ತರಿಸಿದೆ. ಆ ನೋವಿನಿಂದ ಹೊರ ಬರೋದು ತುಂಬಾ ಕಷ್ಟ. ಅವರ ಕುಟುಂಬಕ್ಕೆ ಆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡಾ ಸ್ಪಂದನಾ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಟ ವಿಜಯ್ ರಾಘವೇಂದ್ರ ಪತ್ನಿ ಸಾವನ್ನಪ್ಪಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ವಿಜಯ ರಾಘವೇಂದ್ರ ಮತ್ತು ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದಿದ್ದಾರೆ.

suddiyaana