ಬೆಳ್ಳಿ, ಬೊಮ್ಮನ್ ದಂಪತಿಗೆ ಸಾಕ್ಷ್ಯಚಿತ್ರ ತಂಡದಿಂದಲೇ ಮೋಸ! – 2 ಕೋಟಿ ಪ್ರತಿಫಲ ಕೋರಿ ಮಾವುತ ದಂಪತಿಯಿಂದ ಲೀಗಲ್ ನೋಟಿಸ್
‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಮೂಲಕ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಇಡೀ ಜಗತ್ತಿಗೆ ಪರಿಚಯವಾಗಿದ್ದರು. ಇದೀಗ ಈ ದಂಪತಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ ತಂಡದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಕ್ಕೆ ತಮಗೆ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ದೂರಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬೊಮ್ಮನ್ ಹಾಗೂ ಬೆಳ್ಳಿ ಈ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕಿ ಕಾರ್ತಿಕಿ ಅವರಿಗೆ ಈ ದಂಪತಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!
ಸಾಕ್ಷ್ಯಚಿತ್ರ ಶೂಟ್ ಮಾಡುವ ಸಂದರ್ಭದಲ್ಲಿ ಒಂದು ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿತ್ತು. ಒಂದು ವಾಹನ ಹಾಗೂ ಆರ್ಥಿಕ ಸಹಾಯ ಮಾಡುವುದಾಗಿ ಕಾರ್ತಿಕಿ ಅವರು ಈ ದಂಪತಿಗೆ ಭರವಸೆ ನೀಡಿದ್ದರು. ಆದರೆ, ಅದಾವುದೂ ನೆರವೇರಿಲ್ಲ. ‘ನಮ್ಮನ್ನು ರಿಯಲ್ ಹೀರೋಗಳು ಎಂದು ಎಲ್ಲ ಕಡೆಗಳಲ್ಲೂ ಪರಿಚಯಿಸಲಾಯಿತು. ಆದರೆ, ತಂಡದವರ ಕಡೆಯಿಂದ ನಮಗೆ ಹಣದ ಸಹಾಯ ಸಿಕ್ಕಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಣಿಗೆಗಳನ್ನು ತಂಡದವರು ಸ್ವೀಕರಿಸಿದ್ದಾರೆ. ಆದರೆ, ನಮಗೆ ಯಾವುದೇ ಪರಿಹಾರ ನೀಡದೆ ತಂಡದವರು ಎಲ್ಲಾ ಹಣಕಾಸಿನ ಲಾಭಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್ ಹಾಗೂ ಬೆಳ್ಳಿಯ ಮದುವೆ ದೃಶ್ಯವೊಂದು ಬರುತ್ತದೆ. ಇದಕ್ಕಾಗಿ ಈ ದಂಪತಿಯೇ ಹಣ ಖರ್ಚು ಮಾಡಿದ್ದರಂತೆ. ‘ನಿರ್ದೇಶಕಿ ಕಾರ್ತಿಕಿ ಅವರು ನಮ್ಮ ಮದುವೆಯ ದೃಶ್ಯವನ್ನು ಮರುಸೃಷ್ಟಿ ಮಾಡಲು ಬಯಸಿದ್ದರು. ಹೀಗಾಗಿ ಆ ದೃಶ್ಯವನ್ನು ಸೇರಿಸಲಾಗಿದೆ. ಈ ದೃಶ್ಯದ ಶೂಟ್ಗೆ ಬೇಕಿರುವ ಸಿದ್ಧತೆಯನ್ನು ನಾವೇ ಮಾಡಿಕೊಂಡಿದ್ದೆವು. ಇದಕ್ಕಾಗಿ ನಮ್ಮ ಉಳಿತಾಯ ಖಾತೆಯಿಂದ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಮರಳಿ ನೀಡುವುದಾಗಿ ಅವರು ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ’ ಎಂದು ಬೆಳ್ಳಿ, ಬೊಮ್ಮನ್ ದೂರಿದ್ದಾರೆ.
‘ಆಸ್ಕರ್ ಗೆದ್ದ ನಂತರದಲ್ಲಿ ಕಾರ್ತಿಕಿ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರು ಪ್ರತಿಕ್ರಿಯೆ ನೀಡುವುದನ್ನೇ ನಿಲ್ಲಿಸುವುದನ್ನೇ ಬಿಟ್ಟಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಕಾರ್ತಿಕಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಾರ್ತಿಕಿ ಗೋನ್ಸಾಲ್ವಿಸ್ ನಿರ್ದೇಶನದಲ್ಲಿ ಮೂಡಿಬಂದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಕ್ಕಿದೆ. ಈ ಡಾಕ್ಯುಮೆಂಟರಿಯಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಗಮನ ಸೆಳೆದಿದ್ದರು. ಆನೆಯನ್ನು ಅವರು ನೋಡಿಕೊಂಡ ರೀತಿಗೆ ಎಲ್ಲರೂ ಭಾವುಕರಾಗಿದ್ದರು. ಆನೆ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಅದ್ಭುತವಾಗಿ ವಿವರಿಸಲಾಗಿತ್ತು. ಈಗ ಈ ದಂಪತಿ ಸಿನಿಮಾ ನಿರ್ಮಾತೃರ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ತಮಗೆ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ದೂರಿದ್ದಾರೆ.